ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಲಿದೆ: ಸ್ಟಿಂಗ್ ಆಪರೇಷನ್ ಬಗ್ಗೆ ಹೆಚ್‌ಡಿಕೆ ಸ್ಫೋಟಕ ಹೇಳಿಕೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ (Sting Operation) ಪ್ರಕರಣದ ತನಿಖೆಯ ವಿಚಾರವಾಗಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಜಿಪಿ ಹಾಗೂ ಪೊಲೀಸ್ ಆಯುಕ್ತರು ಈ ಪ್ರಕರಣದಲ್ಲಿ ಯಾವುದೇ ಭರವಸೆ ನೀಡದೆ ಕೇವಲ ಮೌನ ವಹಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಸ್ಟಿಂಗ್ ಆಪರೇಷನ್ ವಿಚಾರವಾಗಿ ಡಿಜಿಪಿ ಅವರನ್ನು ಭೇಟಿ ಮಾಡಿ ಚರ್ಚಿಸಿದರೂ ಅವರು ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ, ಬದಲಿಗೆ ಮೌನದಿಂದ ಸ್ವೀಕರಿಸಿದ್ದಾರೆ. ಈ ಹಿಂದೆ ಪೊಲೀಸ್ ಕಮಿಷನರ್ ಸಹ ಇದೇ ರೀತಿ ಮೌನ ವಹಿಸಿದ್ದರು ಎಂದು ಕುಮಾರಸ್ವಾಮಿ ನೆನಪಿಸಿದರು. ಈ ಪ್ರಕರಣದ ತನಿಖೆಗೆ ತಾವು ಯಾವುದೇ ನಿರ್ದಿಷ್ಟ ಗಡುವನ್ನು ನೀಡಿಲ್ಲ. ಆದರೆ, ವಿಜಯದಶಮಿ ಹಬ್ಬ ಮುಗಿದ ನಂತರವೂ ಈ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ, ರಾಜ್ಯದ ಒಳಿತಿಗಾಗಿ ನಮ್ಮ ಹೋರಾಟವನ್ನು ಅಧಿಕೃತವಾಗಿ ಪ್ರಾರಂಭಿಸುತ್ತೇವೆ ಎಂದು ಅವರು ಗಡುವು ನೀಡಿದರು. ಹೋರಾಟದ ಸ್ವರೂಪ ಹೇಗಿರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ತಿಳಿಸಿದರು.

ಇದನ್ನು ಓದಿ : ಸ್ಟಿಂಗ್ ಆಪರೇಷನ್ ವಿವಾದ: ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಭಟನೆ

ಈ ವಿವಾದವು ಈಗ ರಾಷ್ಟ್ರಪತಿಗಳ ಅಂಗಳಕ್ಕೂ ತಲುಪಿದ್ದು, ಬಹುಶಃ ಕೇಂದ್ರ ಸರ್ಕಾರವೇ ಅಂತಿಮವಾಗಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರ ಯಾವ ರೀತಿಯ ಹೆಜ್ಜೆ ಇಡಲಿದೆ ಎಂಬುದನ್ನು ಕಾದು ನೋಡೋಣ ಎಂದರು. ಕೇವಲ ತಮ್ಮ ಕಾರ್ಯಕರ್ತರ ವಿಚಾರಣೆಯನ್ನು ನಡೆಸಿದ ಬಳಿಕ ತನಿಖೆ ಮುಂದುವರಿದಿಲ್ಲ ಎಂದು ಆರೋಪಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿಗಳು ಈ ತನಿಖೆಗೆ ಸಂಬಂಧಿಸಿದಂತೆ ಯಾವುದೇ ಸರಿಯಾದ ನೀಲಿ ನಕ್ಷೆಯನ್ನು ಇನ್ನೂ ನೀಡಿಲ್ಲ ಎಂದು ಕಟುವಾಗಿ ಟೀಕಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ