ಬೆಂಗಳೂರು: ಇಂದಿನಿಂದ ಸಾಲು ಸಾಲು ರಜೆಗಳ ಹಿನ್ನಲೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ಹೆಚ್ಚಳವಾಗಿದೆ. ನಾಲ್ಕು ದಿನಗಳ ಸುದೀರ್ಘ ರಜೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ತಮ್ಮ ಊರುಗಳತ್ತ ಮುಖ ಮಾಡಿದ್ದು, ನಗರದ ಹೃದಯಭಾಗವಾದ ಮೆಜೆಸ್ಟಿಕ್ ನಲ್ಲಿ ಜನವೋ ಜನ. ತಮ್ಮ ಊರಿನತ್ತ ಪ್ರಯಾಣ ಬೆಳೆಸುತ್ತಿರುವ ಪ್ರಯಾಣಿಕರನ್ನು ಕಾಣಬಹುದು.
ಇಂದು ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸೋಮವಾರ ಗಣರಾಜ್ಯೋತ್ಸವದ ಪ್ರಯುಕ್ತ ಸತತ ಮೂರು ದಿನ ಸರ್ಕಾರಿ ರಜೆ ಇದೆ. ಇದರ ಜೊತೆಗೆ ಮಂಗಳವಾರ ಬ್ಯಾಂಕ್ ಮುಷ್ಕರ ಇರುವುದರಿಂದ ಒಟ್ಟು ನಾಲ್ಕು ದಿನಗಳ ರಜೆ ಸಿಕ್ಕಂತಾಗಿದೆ. ಈ ಸುದೀರ್ಘ ರಜೆಯನ್ನು ಕಳೆಯಲು ಐಟಿ ಉದ್ಯೋಗಿಗಳು ಹಾಗೂ ಕಾರ್ಮಿಕರು ಕುಟುಂಬ ಸಮೇತರಾಗಿ ಊರುಗಳಿಗೆ ಹೊರಟಿದ್ದು, ಬಸ್ ನಿಲ್ದಾಣಗಳತ್ತ ಜನರ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ: Breaking: ಧಗಧಗನೆ ಹೊತ್ತಿ ಉರಿದ ರೆಡ್ಡಿಯ ಮಾಡೆಲ್ ಹೌಸ್
ಸಂಜೆಯಿಂದಲೇ ಆರಂಭವಾದ ಟ್ರಾಫಿಕ್ ಜಾಮ್ ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳನ್ನು ಹೈರಾಣಾಗಿಸಿದೆ. ಕೆಜಿ ರೋಡ್, ರೇಸ್ ಕೋರ್ಸ್ ರೋಡ್ ಮತ್ತು ಶಿವಾನಂದ ಸರ್ಕಲ್ ವ್ಯಾಪ್ತಿಯಲ್ಲಿ ವಾಹನಗಳು ಇರುವೆಗಳಂತೆ ಸಾಲುಗಟ್ಟಿ ಚಲಿಸುತ್ತಿವೆ. ಸಾವಿರಾರು ಖಾಸಗಿ ಮತ್ತು ಸರ್ಕಾರಿ ವಾಹನಗಳು ರಸ್ತೆಗಿಳಿದಿರುವುದರಿಂದ ಕಿಲೋಮೀಟರ್‌ಗಟ್ಟಲೆ ವಾಹನಗಳ ಸಾಲುಗಟ್ಟಿ ತೆವಳುತ್ತಿವೆ.
ಪರಿಸ್ಥಿತಿಯನ್ನು ಹತೋಟಿಗೆ ತರಲು ಉಪ್ಪಾರಪೇಟೆ, ಚಿಕ್ಕಪೇಟೆ ಮತ್ತು ಹೈಗ್ರೌಂಡ್ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜನದಟ್ಟಣೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಿಬ್ಬಂದಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡುತ್ತಿದ್ದು, ನಿಲ್ದಾಣದೊಳಗೆ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ. ಆದರೂ ವಾಹನಗಳ ಸಂಖ್ಯೆ ಮಿತಿ ಮೀರಿರುವುದರಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ.
ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದೆ. ಬಸ್ ನಿಲ್ದಾಣಗಳಲ್ಲಿ ಜನಜಂಗುಳಿ ನಿಯಂತ್ರಿಸಲು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇತ್ತ ನಗರದಿಂದ ಹೊರಹೋಗುವ ಪ್ರಮುಖ ಎಕ್ಸಿಟ್ ಪಾಯಿಂಟ್‌ಗಳಲ್ಲೂ ಭಾರಿ ಟ್ರಾಫಿಕ್ ಕಾಣಿಸಿಕೊಂಡಿದ್ದು, ಬೆಂಗಳೂರಿಗರು ಊರು ತಲುಪಲು ಈ ಬಾರಿ ಅಗ್ನಿಪರೀಕ್ಷೆ ಎದುರಿಸುವಂತಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

