ಇಂಡೋರ್: ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ತಂಡವು ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಭರ್ಜರಿ ಶತಕಗಳ ನೆರವಿನೊಂದಿಗೆ 41 ರನ್ಗಳ ಗೆಲುವು ಸಾಧಿಸಿತು. ಆ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ನ್ಯೂಜಿಲ್ಯಾಂಡ್ ತಂಡವು 1-2 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್, ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತು. ತಂಡದ ಪರ, ಡ್ಯಾರಿಲ್ ಮಿಚೆಲ್ ಅವರು ಆಕರ್ಷಕ ಶತಕ ಬಾರಿಸಿದರು. 15 ಬೌಂಡರಿ ಹಾಗೂ 3 ಸಿಕ್ಸ್ಗಳನ್ನು ಸಿಡಿಸಿ ಒಟ್ಟು 131 ಎಸೆತಗಳಲ್ಲಿ 137 ರನ್ ಸಿಡಿಸುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಅಲ್ಲದೆ, ತಂಡದ ಮತ್ತೊಬ್ಬ ಆಟಗಾರ ಗ್ಲೆನ್ ಫಿಲಿಪ್ಸ್ ಅವರು 88 ಎಸೆತಗಳಲ್ಲಿ 106 ರನ್ಗಳನ್ನು ಬಾರಿಸಿದರು. ಇದರಲ್ಲಿ 9 ಬೌಂಡರಿ ಹಾಗೂ 3 ಸಿಕ್ಸ್ಗಳು ಒಳಗೊಂಡಿವೆ.

ಇದನ್ನೂ ಓದಿ: U-19 ವಿಶ್ವಕಪ್: ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಇನ್ನುಳಿದಂತೆ, ಡೆವೊನ್ ಕಾನ್ವೇ 5, ವಿಲ್ ಯಂಗ್ 30, ಮೈಕೆಲ್ ಬ್ರೇಸ್ವೆಲ್ 28, ಮಿಚೆಲ್ ಹೇ 2, ಜಕಾರಿ ಫೌಲ್ಕ್ಸ್ 10, ಕ್ರಿಸ್ ಕ್ಲಾರ್ಕ್ 11 ರನ್ ಬಾರಿಸಿದರೆ, ಹೆನ್ರಿ ನಿಕೋಲ್ಸ್ ಶೂನ್ಯ ಸುತ್ತಿದರು. ಭಾರತದ ಪರ ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್ ತಲಾ 3 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
338 ರನ್ಗಳ ಗುರಿ ಬೆನ್ನಟ್ಟಿದ ಭಾರತ 46 ಓವರ್ಗಳಲ್ಲಿ 296 ರನ್ ಗಳಿಸಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ತಂಡದ ಪರ ವಿರಾಟ್ ಕೋಹ್ಲಿ ಆಕರ್ಷಕ ಶತಕ ಸಿಡಿಸಿದರು. 108 ಎಸೆತಗಳಲ್ಲಿ 124 ರನ್ ಬಾರಿಸಿದ್ದು, ಇದರಲ್ಲಿ 10 ಬೌಂಡರಿ ಹಾಗೂ 3 ಸಿಕ್ಸ್ಗಳು ಒಳಗೊಂಡಿವೆ.
ಇನ್ನು ವಿರಾಟ್ ಕೊಹ್ಲಿಗೆ ಸಾಥ್ ನೀಡುತ್ತಿದ್ದ ಹರ್ಷಿತ್ ರಾಣಾ ಅವರು ಅರ್ಧ ಶತಕ ಬಾರಿಸಿ ಔಟ್ ಆದರು. ಆ ಮೂಲಕ ಗೆಲುವಿನತ್ತ ಸಾಗುತ್ತಿದ್ದ ಟೀಂ ಇಂಡಿಯಾದ ರನ್ಗಳಿಕೆ ಕಡಿಮೆಯಾಯಿತು. ರಾಣಾ ಅವರು 43 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ 4 ಸಿಕ್ಸರ್ಗಳು ಸೇರಿವೆ. ಇದಕ್ಕೂ ಮುನ್ನ ಕೊಹ್ಲಿಗೆ ಜೊತೆಯಾಗಿ ಆಡುತ್ತಿದ್ದ ನಿತೀಶ್ ಕುಮಾರ್ ರೆಡ್ಡಿ 57 ಎಸೆತಗಳಲ್ಲಿ 53 ರನ್ ಬಾರಿಸಿದರು. ಇದರಲ್ಲಿ 2 ಬೌಂಡರಿ, 2 ಸಿಕ್ಸ್ ಒಳಗೊಂಡಿವೆ.
ಇನ್ನುಳಿದಂತೆ, ರೋಹಿತ್ ಶರ್ಮಾ 11 ರನ್ ಬಾರಿಸಿದರೆ, ಶುಬ್ಮನ್ ಗಿಲ್ 23, ಶ್ರೇಯಸ್ ಅಯ್ಯರ್ 3, ಕೆಎಲ್ ರಾಹುಲ್ 1, ರವೀಂದ್ರ ಜಡೆಜಾ 12, ಕುಲ್ದೀಪ್ ಯಾದವ್ 5, ಅರ್ಶದೀಪ್ 4 ರನ್ (ಅಜೇಯ) ಬಾರಿಸಿದರೆ ಮತ್ತು ಮೊಹಮ್ಮದ್ ಸಿರಾಜ್ ಶೂನ್ಯ ಸುತ್ತಿದರು. ನ್ಯೂಜಿಲ್ಯಾಂಡ್ ಪರ ಜಕಾರಿ ಫೌಲ್ಕ್ಸ್, ಕ್ರಿಸ್ ಕ್ಲಾರ್ಕ್ ತಲಾ 3 ವಿಕೆಟ್ ಕಬಳಿಸಿದರೆ, ಕೈಲ್ ಜೇಮಿಸನ್ 1, ಜೇಡನ್ ಲೆನಾಕ್ಸ್ 2 ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

