ಕೊಲಂಬೊ: ಐಸಿಸಿ ಟಿ20 ವಿಶ್ವಕಪ್ 2026ರ ಭಾರತ–ಪಾಕಿಸ್ತಾನ ಮುಖಾಮುಖಿ ಪಂದ್ಯದಲ್ಲಿ ಟಾಸ್ ವೇಳೆ ಭಾರತ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ (Salman Ali Agha) ಅವರೊಂದಿಗೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ್ದಾರೆ. ಕಳೆದ ವರ್ಷದಿಂದ ಪಾಕ್ ವಿರುದ್ಧದ ಪಂದ್ಯದಲ್ಲಿ ಪ್ರಾರಂಭಿಸಿದ ‘ನೋ-ಹ್ಯಾಂಡ್‌ಶೇಕ್’ ನೀತಿಯನ್ನು ಭಾರತ ತಂಡ ವಿಶ್ವಕಪ್‌ನಲ್ಲೂ ಮುಂದುವರಿಸಿದೆ.
ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್ ಬಳಿಕ ಭಾರತ ಈ ನಿಲುವು ಅನುಸರಿಸುತ್ತಿದ್ದು, ಪುರುಷರ ಹಾಗೂ ಮಹಿಳಾ ತಂಡಗಳ ಜೊತೆಗೆ ವಯೋಮಾನದ ಟೂರ್ನಿಗಳಲ್ಲೂ ಇದೇ ಪ್ರೋಟೋಕಾಲ್ ಜಾರಿಯಲ್ಲಿದೆ. ಪಹಲ್ಗಾಂಮ್ ದಾಳಿಯ ನಂತರ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ‘ಆಪರೇಶನ್ ಸಿಂಧೂರ್’ ಹಿನ್ನೆಲೆ ಈ ನೀತಿ ರೂಪುಗೊಂಡಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: T20 Worldcup: ಗೆಲುವಿನ ಮೂಲಕ ಸೂಪರ್-8 ಗೆ ಎಂಟ್ರಿ ಕೊಟ್ಟ ವೆಸ್ಟ್ ಇಂಡೀಸ್
ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಅಭಿಷೇಕ್ ಶರ್ಮಾ ಹಾಗೂ ಕುಲದೀಪ್ ಯಾದವ್ ತಂಡಕ್ಕೆ ಮರಳಿದ್ದಾರೆ. ಪಾಕಿಸ್ತಾನ ಯಾವುದೇ ಬದಲಾವಣೆ ಮಾಡಿಲ್ಲ.
ಟಾಸ್ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, “ಇಂತಹ ಪಂದ್ಯಗಳು ಹೈ ವೋಲ್ಟೇಜ್ ಆಗಿರುತ್ತವೆ. ಆದರೆ ನಾವು ನಮ್ಮ ಆಟದ ಮೇಲೆ ಗಮನ ಕೊಡಬೇಕು. ನಮ್ಮ ಯೋಜನೆ ಪ್ರಕಾರ ಆಟ ಆಡುತ್ತೇವೆ” ಎಂದರು.
ಭಾರತ–ಪಾಕಿಸ್ತಾನ ಪಂದ್ಯಗಳು ಸದಾ ಹೆಚ್ಚಿನ ಉದ್ವಿಗ್ನತೆಯೊಂದಿಗೆ ನಡೆಯುತ್ತಿದ್ದು, ಈ ಬಾರಿ ಕೂಡ ಮೈದಾನದಲ್ಲಿ ಕ್ರೀಡಾ ರೋಚಕತೆಗೆ ಜೊತೆಗೆ ರಾಜಕೀಯ ಸನ್ನಿವೇಶದ ಛಾಯೆಯೂ ಕಂಡುಬಂದಿತು.

