ಮುಂಬೈ: ವಾಂಖೆಡೆ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳು ಕಂಡದ್ದು ಕೇವಲ ಪಂದ್ಯವಲ್ಲ, ಅದು ರನ್ಗಳ ಮಳೆ, ಸಿಕ್ಸರ್ಗಳ ಸಿಡಿಲು ಮತ್ತು ಕೊನೆಯ ಕ್ಷಣದ ರೋಚಕ ಹೋರಾಟ. ಟಿ20 ವಿಶ್ವಕಪ್ 2026ರ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 7 ರನ್ಗಳ ರೋಚಕ ಗೆಲುವು ಸಾಧಿಸಿ ಭರ್ಜರಿಯಾಗಿ ಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಇಂಗ್ಲೆಂಡ್ ಬೌಲರ್ಗಳ ಮೇಲೆ ಅಬ್ಬರಿಸಿ 254 ರನ್ಗಳ ಭಾರೀ ಗುರಿ ನೀಡಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೂಡ ಕೊನೆಯವರೆಗೂ ಹೋರಾಡಿ 247 ರನ್ ಸಿಡಿಸಿದರೂ ಜಯ ಕೈತಪ್ಪಿತು. ಪಂದ್ಯದ ವಿಶೇಷವೆಂದರೆ… ಈ ಕಾಳಗದಲ್ಲಿ ಉಭಯ ತಂಡಗಳ ಆಟಗಾರರು ಸಿಕ್ಸರ್ಗಳ ಮಳೆಯನ್ನೇ ಸುರಿಸಿದರು.

ಹೌದು, ಈ ಪಂದ್ಯದಲ್ಲಿ ಒಟ್ಟು 34 ಸಿಕ್ಸರ್ಗಳು ಬಾರಿಸಲಾಗಿದ್ದು, ಟಿ20 ವಿಶ್ವಕಪ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ. ಆ ಮೂಲಕ ಇದೇ ವಿಶ್ವಕಪ್ನಲ್ಲಿ ವೆಸ್ಟ್ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳ ಹೊಡೆದಿದ್ದ 31 ಸಿಕ್ಸರ್ಗಳ ದಾಖಲೆಯನ್ನು ಭಾರತ-ಇಗ್ಲೆಂಡ್ ಪಂದ್ಯವು ಮುರಿದಿದೆ.
ಇದನ್ನೂ ಓದಿ: T20 World Cup 2026: ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ
ನಿನ್ನೆ ನಡೆದ ಭಾರತ vs ಇಂಗ್ಲೆಂಡ್ ಪಂದ್ಯದಲ್ಲಿ 34 ಸಿಕ್ಸರ್ಗಳು ಸಿಡಿದಿದ್ದರೆ, ವೆಸ್ಟ್ ಇಂಡೀಸ್ vs ಜಿಂಬಾಬ್ವೆ ಪಂದ್ಯದಲ್ಲಿ 31 ಸಿಕ್ಸರ್ಗಳನ್ನು ಬಾರಿಸಲಾಗಿತ್ತು. 2014ರಲ್ಲಿ ನೆದರ್ಲೆಂಡ್ vs ಐರ್ಲೆಂಡ್ ಪಂದ್ಯದಲ್ಲಿ 30 ಸಿಕ್ಸ್ಗಳನ್ನು ಬಾರಿಸಲಾಗಿತ್ತು.
ರನ್ ಮಳೆಯಲ್ಲೂ ದಾಖಲೆ
ಈ ಪಂದ್ಯದಲ್ಲಿ ಎರಡೂ ತಂಡಗಳು ಸೇರಿ 499 ರನ್ ಬಾರಿಸಿದ್ದು, ಟಿ20 ವಿಶ್ವಕಪ್ ಇತಿಹಾಸದ ಎರಡನೇ ಗರಿಷ್ಠ ಮ್ಯಾಚ್ ಎಗ್ರಿಗೇಟ್ ಆಗಿದೆ. 2023ರಲ್ಲಿ ಸೌತ್ ಆಫ್ರಿಕಾ vs ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ 517 ರನ್ ಬಾರಿಸಲಾಗಿದೆ. ಇತ್ತೀಚೆಗೆ ನಡೆದ ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಬಾರಿಸಲಾಗಿದ್ದ 496 ರನ್ಗಳ ದಾಖಲೆಯನ್ನು ನಿನ್ನೆ ನಡೆದ ಭಾರತ-ಇಂಗ್ಲೆಂಡ್ ನಡುವಿನ ಪಂದ್ಯ ಬೀಟ್ ಮಾಡಿದೆ. ಈ ಪಂದ್ಯದಲ್ಲಿ ಒಟ್ಟು 499 ರನ್ಗಳನ್ನು ಬಾರಿಸಲಾಗಿದೆ.
ಈ ಗೆಲುವಿನೊಂದಿಗೆ ಭಾರತ ಸತತ ಎರಡನೇ ಬಾರಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಬರೆದಿದೆ. ಒಟ್ಟಿನಲ್ಲಿ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾಗದ ಕ್ಷಣಗಳನ್ನು ನೀಡಿತು. ಈಗ ಎಲ್ಲರ ಕಣ್ಣು ಟಿ20 ವಿಶ್ವಕಪ್ ಫೈನಲ್ ಮೇಲೆ ನೆಟ್ಟಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

