ನವದೆಹಲಿ: ಭಾರತೀಯ ವಾಯುಪಡೆಯು ತನ್ನ ಸ್ವದೇಶಿ ನಿರ್ಮಿತ ‘ತೇಜಸ್’ ಲಘು ಯುದ್ಧ ವಿಮಾನಗಳ (LCA) ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ (Grounding). ತಾಂತ್ರಿಕ ತಪಾಸಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸುಮಾರು 23 ವರ್ಷಗಳ ಯಶಸ್ವಿ ಹಾರಾಟದ ಇತಿಹಾಸ ಹೊಂದಿದ್ದ ತೇಜಸ್ ವಿಮಾನವು, ಈ ತಿಂಗಳ ಆರಂಭದಲ್ಲಿ ರಾಜಸ್ಥಾನದ ಜೈಸಲ್ಮೇರ್ ಬಳಿ ತರಬೇತಿ ಹಾರಾಟದ ವೇಳೆ ಮೊದಲ ಬಾರಿಗೆ ಅಪಘಾತಕ್ಕೀಡಾಗಿತ್ತು.
ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ‘ಕೋರ್ಟ್ ಆಫ್ ಇನ್‌ಕ್ವೈರಿ’ (Court of Inquiry) ಆದೇಶಿಸಲಾಗಿದೆ. ವಿಮಾನದ ಎಂಜಿನ್ ಅಥವಾ ತಾಂತ್ರಿಕ ವ್ಯವಸ್ಥೆಯಲ್ಲಿ ಯಾವುದೇ ದೋಷಗಳಿವೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಸ್ತುತ ವಾಯುಪಡೆಯ ಬಳಿ ಇರುವ ಎಲ್ಲಾ ತೇಜಸ್ ವಿಮಾನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ವಿಮಾನದ ವಿನ್ಯಾಸ ಅಥವಾ ಬಿಡಿಭಾಗಗಳಲ್ಲಿ ಯಾವುದೇ ವ್ಯವಸ್ಥಿತ ದೋಷವಿಲ್ಲ ಎಂದು ಖಚಿತವಾಗುವವರೆಗೆ ಹಾರಾಟವನ್ನು ಸ್ಥಗಿತಗೊಳಿಸುವುದು ವಾಯುಪಡೆಯ ಸಾಮಾನ್ಯ ಪ್ರಕ್ರಿಯೆಯಾಗಿದೆ.

ಇದನ್ನೂ ಓದಿ: ಇನ್ನು ಮುಂದೆ ಓಡಿ ಹೋಗಿ ಮದುವೆಯಾಗಿ ರಿಜಿಸ್ಟ್ರೇಷನ್ ಮಾಡಬೇಕೆಂದರೆ ಪೋಷಕರ ಅನುಮತಿ ಕಡ್ಡಾಯ!
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ತಾಂತ್ರಿಕ ತಜ್ಞರು ಮತ್ತು ವಾಯುಪಡೆಯ ಅಧಿಕಾರಿಗಳು ಜಂಟಿಯಾಗಿ ವಿಮಾನಗಳ ಫಿಟ್‌ನೆಸ್ ಪರಿಶೀಲಿಸುತ್ತಿದ್ದಾರೆ. ಒಮ್ಮೆ ಹಸಿರು ನಿಶಾನೆ ದೊರೆತ ನಂತರ ತೇಜಸ್ ವಿಮಾನಗಳು ಮತ್ತೆ ಬಾನೆತ್ತರಕ್ಕೆ ಹಾರಲಿವೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

