ಟೆಲ್ ಅವೀವ್: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ (Flydubai) ವಿಮಾನವನ್ನು ಪತನಗೊಳಿಸಿ, 9/11 ಮಾದರಿಯ ಬೃಹತ್ ಭಯೋತ್ಪಾದನಾ ದಾಳಿ ನಡೆಸಲು ಯತ್ನಿಸಿದ್ದ ಓಮನ್ ಮೂಲದ ಕೋ-ಪೈಲಟ್‌ನ ಸಂಚನ್ನು ವಿಮಾನದ ಕ್ಯಾಪ್ಟನ್ ಸಾಹಸದಿಂದ ವಿಫಲಗೊಳಿಸಿದ್ದಾರೆ. ಜೀವದ ಹದನೋಡದೆ ಹೋರಾಡಿ 27 ಮಕ್ಕಳು ಸೇರಿದಂತೆ ಒಟ್ಟು 180 ಪ್ರಯಾಣಿಕರ ಪ್ರಾಣ ಉಳಿಸಿದ ಆ ಸಾಹಸಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಭಾರತೀಯ ಮೂಲದವರು ಎಂಬ ಹೆಮ್ಮೆಯ ಸಂಗತಿ ಬೆಳಕಿಗೆ ಬಂದಿದೆ.
ಇವರು ಈ ಹಿಂದೆ ಭಾರತದ ಖಾಸಗಿ ವಿಮಾನಯಾನ ಸಂಸ್ಥೆಯಾದ ‘ಸ್ಪೈಸ್‌ಜೆಟ್’ನಲ್ಲಿ ಹಲವು ವರ್ಷಗಳ ಕಾಲ ಪೈಲಟ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇಸ್ರೇಲಿನ ಮಾಧ್ಯಮ ಸಂಸ್ಥೆಗಳಾದ ‘ಚಾನೆಲ್ 12’ ಹಾಗೂ ‘ವೈನೆಟ್’ ಕ್ಯಾಪ್ಟನ್ ಸ್ಮಿತ್ ಭಾರತೀಯ ಪ್ರಜೆ ಎಂಬುದನ್ನು ದೃಢಪಡಿಸಿವೆ.
ಕಾಕ್‌ಪಿಟ್‌ನಲ್ಲಿ ಚಾಕು ಇರಿತ, ರಕ್ತಪಾತ ಮತ್ತು ಪ್ರಯಾಣಿಕರ ಪ್ರವೇಶ:
ಫ್ಲೈದುಬೈನ FZ1073 ವಿಮಾನ ಗಾಳಿಯಲ್ಲಿ ಹಾರಾಟ ನಡೆಸುತ್ತಿದ್ದಾಗ, ಓಮನ್ ಮೂಲದ ಕೋ-ಪೈಲಟ್ ಇದ್ದಕ್ಕಿದ್ದಂತೆ ವಿಮಾನದ ನಿಯಂತ್ರಣ ಸಾಧಿಸಿ ಅದನ್ನು ಪತನಗೊಳಿಸಲು ಯತ್ನಿಸಿದ್ದಾನೆ. ಇದನ್ನು ತಡೆದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ವಿರುದ್ಧ ಕೋ-ಪೈಲಟ್ ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದು, ಕಾಕ್‌ಪಿಟ್‌ನಲ್ಲಿ ನೂಕಾಟ ನಡೆದು ರಕ್ತ ಚೆಲ್ಲಿತ್ತು.
ಕಿರುಚಾಟ ಕೇಳಿ ಧಾವಿಸಿದ ಪ್ರಯಾಣಿಕರು: ಕಾಕ್‌ಪಿಟ್‌ನಿಂದ ವಿಪರೀತ ಕಿರುಚಾಟ ಕೇಳಿಬಂದಾಗ ಆತಂಕಗೊಂಡ ಪ್ರಯಾಣಿಕರು ಬಾಗಿಲು ತೆರೆದು ನೋಡಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಅವರಿಗೆ ನೆರವಾಗಲು ಹಲವು ಪ್ರಯಾಣಿಕರು ಒಳನುಗ್ಗಿ, ಚಾಕು ಬೀಸುತ್ತಿದ್ದ ಕೋ-ಪೈಲಟ್ ಅನ್ನು ಥಳಿಸಿ, ಕಟ್ಟಿಹಾಕಿದ್ದಾರೆ.
ಸಮಯಪ್ರಜ್ಞೆ ಮೆರೆದ ಇಬ್ಬರು ವೈದ್ಯರು: ವಿಮಾನದಲ್ಲಿದ್ದ ಇಬ್ಬರು ವೈದ್ಯರು ತಕ್ಷಣವೇ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಕ್ಯಾಪ್ಟನ್ ಸ್ಮಿತ್ ಹಾಗೂ ಗಾಯಗೊಂಡ ಕೋ-ಪೈಲಟ್‌ಗೆ ಪ್ರಥಮ ಚಿಕಿತ್ಸೆ ನೀಡಿದರು.
ಆಫ್-ಡ್ಯೂಟಿ ಪೈಲಟ್‌ನಿಂದ ಇಮರ್ಜೆನ್ಸಿ ಲ್ಯಾಂಡಿಂಗ್: ಅದೃಷ್ಟವಶಾತ್ ಅದೇ ವಿಮಾನದಲ್ಲಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಇನ್ನೊಬ್ಬ ಪೈಲಟ್ ತಕ್ಷಣವೇ ಕಾಕ್‌ಪಿಟ್‌ಗೆ ಧಾವಿಸಿ ವಿಮಾನದ ನಿಯಂತ್ರಣ ತೆಗೆದುಕೊಂಡರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.
ಇದನ್ನೂ ಓದಿ: ಇರಾನ್ ಮೇಲೆ ಧ್ವಂಸಕಾರಿ ದಾಳಿಯ ಎಚ್ಚರಿಕೆ ನೀಡಿದ ಇಸ್ರೇಲ್: ವಿಶ್ವಸಂಸ್ಥೆಯಲ್ಲಿ ರಾಯಭಾರಿ ಡ್ಯಾನಿ ಡ್ಯಾನನ್ ಆಕ್ರೋಶ
ಭಯೋತ್ಪಾದನಾ ದಾಳಿಯ ಕೋನದಲ್ಲಿ ತನಿಖೆ:
ಘಟನೆ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಇಸ್ರೇಲ್ ಸರ್ಕಾರ ತನ್ನ ಯುದ್ಧ ವಿಮಾನಗಳನ್ನು (Fighter Jets) ಸಜ್ಜುಗೊಳಿಸಿ ವೈಮಾನಿಕ ಭದ್ರತೆಯನ್ನು ತೀವ್ರಗೊಳಿಸಿತ್ತು. ಇಸ್ರೇಲ್ ಅಧಿಕಾರಿಗಳು ಇದನ್ನು 9/11 ಮಾದರಿಯ ಭೀಕರ ಉಗ್ರರ ದಾಳಿಯ ಯತ್ನವೆಂದು ಪರಿಗಣಿಸಿ ತನಿಖೆ ಚುರುಕುಗೊಳಿಸಿದ್ದಾರೆ ಫ್ಲೈದುಬೈ ಸಂಸ್ಥೆಯು ಘಟನೆಯನ್ನು ಅಧಿಕೃತವಾಗಿ ದೃಢಪಡಿಸಿದ್ದು, ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. ಅಂತಾರಾಷ್ಟ್ರೀಯ ಭದ್ರತಾ ಸಂಸ್ಥೆಗಳೊಂದಿಗೆ ಸೇರಿ ಸಂಸ್ಥೆಯು ತನಿಖೆ ಆರಂಭಿಸಿದೆ.
ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

