ಮಂಗಳೂರು : ಮಂಗಳೂರು ಸಮೀಪದ ಜೋಕಟ್ಟೆಯಲ್ಲಿರುವ ಎಂಆರ್‌ಪಿಎಲ್ (ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಕೈಗಾರಿಕಾ ಘಟಕದಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡವು ಕರಾವಳಿಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಸರಣಿ ಘಟನೆಗಳು ತುಳುನಾಡಿನ ಕಾರಣಿಕ ದೈವದ ಮುನಿಸಿನ ಫಲವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಬಲವಾಗಿ ಮೂಡಿದ್ದು, 800 ವರ್ಷಗಳ ಹಿಂದಿನ ನೆಲ್ಲಿದಡಿ ಗುತ್ತು ‘ಜುಮಾದಿ ಬಂಟ’ ದೈವಸ್ಥಾನದ ಭೂ ವಿವಾದವೇ ಇದಕ್ಕೆ ಮೂಲ ಕಾರಣ ಎಂದು ಭಕ್ತರು ನಂಬಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.
‘ನನ್ನ ಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ’: ನಾಲ್ಕು ತಿಂಗಳ ಹಿಂದೆಯೇ ಎಚ್ಚರಿಸಿದ್ದ ದೈವ
ದೈವಸ್ಥಾನದ ಸುತ್ತಮುತ್ತಲಿನ ಜಾಗವನ್ನು ಎಂಆರ್‌ಪಿಎಲ್ ಸ್ವಾಧೀನಪಡಿಸಿಕೊಂಡಾಗಿನಿಂದಲೂ ಇಲ್ಲಿ ವಿವಾದ ಹೊತ್ತಿ ಉರಿಯುತ್ತಿದೆ. ವರ್ಷಗಳಿಂದ ದೈವಸ್ಥಾನದಲ್ಲಿ ನಡೆಯುವ ಪೂಜಾ ವಿಧಿವಿಧಾನಗಳು ಹಾಗೂ ನೇಮೋತ್ಸವಗಳಿಗೆ ಎಂಆರ್‌ಪಿಎಲ್ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪಗಳಿದ್ದವು. ಭಕ್ತರ ಪ್ರವೇಶ ನಿರ್ಬಂಧಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ.
ನಾಲ್ಕು ತಿಂಗಳ ಹಿಂದೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ದೈವಾವೇಶದ ವೇಳೆ ದೈವವು, “ನನ್ನ ಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ. ನನ್ನ ಮಣ್ಣನ್ನು ಉಳಿಸಿಕೊಳ್ಳಲು ನನಗೆ ಗೊತ್ತಿದೆ. ಯಾರು ನನ್ನನ್ನು ಇಲ್ಲಿಂದ ಹೊರಹಾಕಲು ಪ್ರಯತ್ನಿಸುತ್ತಾರೋ, ಅವರನ್ನು ಬಿಡುವುದಿಲ್ಲ” ಎಂದು ಕಠಿಣವಾಗಿ ಎಚ್ಚರಿಸಿತ್ತು.
ಅಂದು ದೈವಸ್ಥಾನಕ್ಕೆ ಸೇರಿದ ಜಾಗವನ್ನು ಬಿಟ್ಟುಕೊಡುವುದಾಗಿ MRPL ಅಧಿಕಾರಿಗಳು ಭರವಸೆ ನೀಡಿ, ಸರ್ವೇ ಕಾರ್ಯ ನಡೆಸಿದ್ದರೂ, ಇಲ್ಲಿಯವರೆಗೆ ಕನಿಷ್ಠ 8 ರಿಂದ 10 ಎಕರೆ ಜಾಗವನ್ನು ವಾಪಸ್ ನೀಡಿಲ್ಲ ಎಂದು ದೈವಸ್ಥಾನದ ಪ್ರಮುಖರು ದೂರಿದ್ದಾರೆ.
ಇದನ್ನೂ ಓದಿ: ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಸಚಿವ ಯು.ಟಿ. ಖಾದರ್ ಮಹತ್ವದ ಹೇಳಿಕೆ
ಸರಣಿ ಅಗ್ನಿ ಅವಘಡಗಳು ಮತ್ತು ‘ದೈವದ ಕಾರಣಿಕ’:
ಎಂಆರ್‌ಪಿಎಲ್ ಘಟಕದಲ್ಲಿ ಈ ಹಿಂದೆಯೂ ಸರಣಿ ಬೆಂಕಿ ಅವಘಡಗಳು ಹಾಗೂ ತಾಂತ್ರಿಕ ಅಡಚಣೆಗಳು ಸಂಭವಿಸಿವೆ.
9 ವರ್ಷಗಳ ಹಿಂದೆ ಮುಖ್ಯ ಗೇಟ್ ಬಳಿ ಬೆಂಕಿ ಹತ್ತಿಕೊಂಡಿತ್ತು.
ಇತ್ತೀಚಿನ ಅವಘಡಕ್ಕೂ ಮುನ್ನ ಮೂರು ಬಾರಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು.
ಪ್ರತಿ ಬಾರಿಯೂ ಅವಘಡಗಳು ಸಂಭವಿಸಿದಾಗ ಎಂಆರ್‌ಪಿಎಲ್ ಅಧಿಕಾರಿಗಳು ದೈವಸ್ಥಾನಕ್ಕೆ ಬಂದು ಕ್ಷಮೆ ಯಾಚಿಸಿ, ಪರಿಹಾರಕ್ಕಾಗಿ ಪ್ರಾರ್ಥಿಸುತ್ತಿದ್ದರು. ಆದರೆ, ಜಾಗ ಬಿಟ್ಟುಕೊಡುವ ವಿಚಾರದಲ್ಲಿ ಮಾತ್ರ ಕಂಪನಿ ಹಾಗೂ ಸರ್ಕಾರ ಮೌನ ವಹಿಸಿವೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ದೈವದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದೇ ಈ ಬೆಂಕಿ ಅವಘಡಕ್ಕೆ ಕಾರಣ ಎಂದು ಸ್ಥಳೀಯ ಸಮುದಾಯ ಬಲವಾಗಿ ನಂಬಿದ್ದು, ತಕ್ಷಣವೇ ಭೂ ವಿವಾದ ಬಗೆಹರಿಸುವಂತೆ ಆಗ್ರಹಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

