Breaking News

ಕೈಕೊಟ್ಟ ಪ್ರಿಯತಮೆ: ಕೋಪದಿಂದ ತಂಗಿಯನ್ನೇ 40 ಬಾರಿ ಇರಿದು ಕೊಲೆ ಮಾಡಿದ ಅಣ್ಣ! ತಾಯಿ ಮೇಲೂ ದಾಳಿ

instagram-love-breakup-brother-kills-twin-sister-40-stab-moradabad

ಉತ್ತರ ಪ್ರದೇಶದ ಮೋರಾದಾಬಾದ್ ನಗರದಲ್ಲಿ ಹೋಳಿ ಹಬ್ಬಕ್ಕಾಗಿ ಮನೆಗೆ ಬಂದಿದ್ದ ಕುಟುಂಬದಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪ್ರೇಮ ವಿಫಲತೆಯಿಂದ ಮನನೊಂದು ಯುವಕನೊಬ್ಬ ತನ್ನ ಒಡಹುಟ್ಟಿದ ತಂಗಿಯನ್ನೇ ಚಾಕುವಿನಿಂದ 40ಕ್ಕೂ ಹೆಚ್ಚು ಬಾರಿ  ಇರಿದು ಕೊಂದಿದ್ದು, ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೋರಾದಾಬಾದ್‌ನ ಮಜೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ಧಿ ವಿಹಾರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ನೀಲಿಮಾ ಎಂಬ ಮಹಿಳೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಆರೋಗ್ಯ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಅವಳಿ ಮಕ್ಕಳು. ಒಂದು ಗಂಡು, ಒಂದು ಹೆಣ್ಣು.

Advertisement

ಮಗನ ಹೆಸರು ಹಾರ್ದಿಕ್ ಮತ್ತು ಮಗಳ ಹೆಸರು ಹಿಮ್ಶಿಖಾ (25) ಇಬ್ಬರೂ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದರು. ಹೋಳಿ ಹಬ್ಬ ಆಚರಿಸಲು ಅವರು ಮೋರಾದಾಬಾದ್‌ನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಹಬ್ಬದ ಬಳಿಕ ಶುಕ್ರವಾರ ಮತ್ತೆ ಗುರುಗ್ರಾಮಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದರು.

ತಂಗಿಯ ಬರ್ಬರ ಹತ್ಯೆ

ಹೋಳಿ ರಜೆ ಮುಗಿದ ಬಳಿಕ ನೀಲಿಮಾ ತಮ್ಮ ಕಚೇರಿಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಹಾರ್ದಿಕ್ ಮತ್ತು ಹಿಮ್ಶಿಖಾ ಮಾತ್ರ ಇದ್ದರು. ಅದೇ ಸಮಯದಲ್ಲಿ ಹಾರ್ದಿಕ್ ತನ್ನ ತಂಗಿ ಹಿಮ್ಶಿಖಾ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ.

ಇದನ್ನೂ ಓದಿ: ರಾತ್ರಿ ಗುಡಿಸಲಿಗೆ ನುಗ್ಗಿ 90 ವರ್ಷದ ಅಜ್ಜಿ ಮೇಲೆ ಸಾಮೂಹಿಕ ಅತ್ಯಾಚಾರ

ತಾಯಿಯ ಹತ್ಯೆಗೂ ಯತ್ನ

ಈ ದಾಳಿಯ ಬಳಿಕ ಹಾರ್ದಿಕ್ ತನ್ನ ತಾಯಿ ಕೆಲಸ ಮಾಡುತ್ತಿದ್ದ ಕಚೇರಿಗೆ ತೆರಳಿ “ಮನೆಗೆ ಬರಬೇಕು” ಎಂದು ಹೇಳಿ ಕರೆದುಕೊಂಡು ಬಂದಿದ್ದಾನೆ. ನೀಲಿಮಾ ಮನೆಗೆ ಬಂದಾಗ, ಅವರ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯ ಕಂಡು ಬೆಚ್ಚಿಬಿದ್ದರು. ಅವರ ಕಿರುಚಾಟದಿಂದ ಸುತ್ತಮುತ್ತಲಿನವರು ಆತಂಕಗೊಂಡರು. ಅದೇ ವೇಳೆ ಹಾರ್ದಿಕ್ ತನ್ನ ತಾಯಿಯ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿ, ನಂತರ ಕಾರಿನಲ್ಲಿ ಸ್ಥಳದಿಂದ ಪರಾರಿಯಾದನು.

ತಾಯಿಯ ಕಿರುಚಾಟ ಕೇಳಿದ ನೆರೆಹೊರೆಯವರು ಮನೆಗೆ ದೌಡಾಯಿಸಿದರು. ಅಲ್ಲಿ ಕಂಡ ದೃಶ್ಯ ಅವರಿಗೆ ಬೆಚ್ಚಿಬೀಳುವಂತೆ ಮಾಡಿತು. ತಕ್ಷಣ ಆಂಬುಲೆನ್ಸ್ ಕರೆಸಿ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಹಿಮ್ಶಿಖಾ ಮೃತಳಾಗಿದ್ದಾಳೆ ಎಂದು ಘೋಷಿಸಿದರು. ಗಂಭೀರವಾಗಿ ಗಾಯಗೊಂಡ ನೀಲಿಮಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಲೆ ಹಿಂದೆ ಲವ್‌ ಬ್ರೇಕಪ್‌ ಕೋಪ

ಈ ದಾಳಿಯ ಹಿಂದೆ ಪ್ರೇಮ ವೈಫಲ್ಯ ಕಾರಣ ಎನ್ನುವುದು ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿದೆ.  ಹಾರ್ದಿಕ್ ಪುಣೆಯೊಬ್ಬ ಯುವತಿಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಗೊಂಡು ಪ್ರೀತಿಯಲ್ಲಿ ಬಿದ್ದಿದ್ದನು. ಆದರೆ ಸುಮಾರು ಏಳು ತಿಂಗಳ ಹಿಂದೆ ಆ ಸಂಬಂಧ ಮುರಿದು ಹೋಗಿತ್ತು. ಮೋರಾದಾಬಾದ್ ನಗರ ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್ ಹೇಳುವಂತೆ, ಈ ಬ್ರೇಕ್‌ಅಪ್ ಬಳಿಕ ಹಾರ್ದಿಕ್ ತುಂಬಾ ಮನಸ್ಸು ಕುಂದಿಕೊಂಡಿದ್ದನು.

ಇದನ್ನೂ ಓದಿ: ಬಳ್ಳಾರಿ: ಹಾಸ್ಟೆಲ್‌ನಲ್ಲಿ ಸಹಪಾಠಿಗಳ ಮೇಲೆ 9ನೇ ತರಗತಿ ವಿದ್ಯಾರ್ಥಿ ಹಲ್ಲೆ! ಓರ್ವ ಸಾವು, 7 ಮಂದಿಗೆ ಗಾಯ

“ಬ್ರೇಕ್‌ಅಪ್ ಬಳಿಕ ಹಾರ್ದಿಕ್ ತುಂಬಾ ಕೋಪಿಷ್ಠನಾಗಿದ್ದ. ಆ ಸಂಬಂಧ ಮುರಿಯಲು ನಾನು ಮತ್ತು ಅವನ ತಂಗಿ ಕಾರಣ ಎಂದು ಅವನು ಭಾವಿಸುತ್ತಿದ್ದ” ಎಂದು ಆಸ್ಪತ್ರೆಯಲ್ಲಿ ಪೊಲೀಸರಿಗೆ ನೀಲಿಮಾ ಹೇಳಿಕೆ ನೀಡಿದ್ದಾರೆ.

ಪೊಲೀಸರ ವಿಚಾರಣೆಯಲ್ಲಿ ಹಾರ್ದಿಕ್ ಈ ದಾಳಿಯನ್ನು ಒಪ್ಪಿಕೊಂಡಿದ್ದಾನೆ. “ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ಹುಡುಗಿಯೊಂದಿಗೆ ಮಾತು ಆರಂಭವಾಗಿ ನಾನು ಪ್ರೀತಿಗೆ ಬಿದ್ದೆ. ಏಳು ತಿಂಗಳ ಹಿಂದೆ ಬ್ರೇಕ್‌ಅಪ್ ಆಯಿತು. ನಾನು ಡಿಪ್ರೆಷನ್‌ಗೆ ಒಳಗಾದೆ. ತಾಯಿ ಮತ್ತು ತಂಗಿ ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಆ ದಿನ ಏಕಾಏಕಿ ಕೋಪ ಬಂದಿದೆ” ಎಂದು ಆತ ಹೇಳಿದ್ದಾನೆ.

“ಅಡುಗೆ ಮನೆಯಿಂದ ಚಾಕು ತೆಗೆದುಕೊಂಡು ಹೋಗಿ ಹಾಸಿಗೆಯ ಮೇಲೆ ಇದ್ದ ತಂಗಿಯನ್ನು ಹಲವು ಬಾರಿ ಇರಿದಿದ್ದೆ. ತಾಯಿಯನ್ನೂ ಕೊಲ್ಲುವ ಉದ್ದೇಶದಿಂದ ಹಲ್ಲೆ ಮಾಡಿದೆ” ಎಂದು ಆರೋಪಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

ಬೆಚ್ಚಿಬೀಳಿಸಿದ ಪೋಸ್ಟ್‌ಮಾರ್ಟಂ ವರದಿ 

ಪೋಸ್ಟ್‌ಮಾರ್ಟಂ ವರದಿಯಲ್ಲಿ ಹಿಮ್ಶಿಖಾ ದೇಹದಲ್ಲಿ 40ಕ್ಕೂ ಹೆಚ್ಚು ಚಾಕು ಇರಿತಗಳ ಗುರುತುಗಳು ಪತ್ತೆಯಾಗಿವೆ. ಇದು ದಾಳಿ ಎಷ್ಟು ಕ್ರೂರವಾಗಿತ್ತು ಎಂಬುದನ್ನು ತೋರಿಸುತ್ತದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಬಗ್ಗೆ ಮುಂದಿನ ತನಿಖೆ ಮುಂದುವರಿದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು