ಜೆಇಇ ಪರೀಕ್ಷೆ : ಜೆಇಇ ಮೇನ್ ಎನ್ನುವುದು ಭಾರತದ ಅತ್ಯಂತ ಪ್ರಮುಖ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳಲ್ಲೊಂದು. ಈ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುತ್ತದೆ ಹಾಗೂ ಎಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದು ಪ್ರಮುಖ ಹಂತವಾಗಿದೆ.
ಜೆಇಇ ಮೇನ್ ಪರೀಕ್ಷೆಯಿಂದ ವಿದ್ಯಾರ್ಥಿಗಳು ಅನೇಕ ರಾಜ್ಯ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು. ಜೆಇಇ ಮೇನ್ ಪರೀಕ್ಷೆಯಲ್ಲಿ ಮುಖ್ಯವಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಆರ್ಕಿಟೆಕ್ಚರ್ ಕೋರ್ಸ್‌ಗಾಗಿ ಗಣಿತ, ಆಪ್ಟಿಟ್ಯೂಡ್ ಮತ್ತು ಡ್ರಾಯಿಂಗ್ ಟೆಸ್ಟ್ ಇರುತ್ತದೆ. ಜೆಇಇ ಮೇನ್ ಸಾಮಾನ್ಯವಾಗಿ ಆನ್‌ಲೈನ್ ಮೂಲಕ ನಡೆಯುತ್ತದೆ. ವರ್ಷಕ್ಕೆ ಎರಡು ಬಾರಿ (ಜನವರಿ ಮತ್ತು ಏಪ್ರಿಲ್ ಸೆಷನ್) ನಡೆಸಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳುವ ಅವಕಾಶ ದೊರೆಯುತ್ತದೆ.

ಇತ್ತೀಚಿನ ಎನ್‌ಟಿಎ ಸೂಚನೆ (2026) ಜೆಇಇ ಮೇನ್ 2026 ಸಂಬಂಧವಾಗಿ, ಗುರುತಿನ ದಾಖಲೆಗಳು ಹಾಗೂ ಫೋಟೋಗಳ ಪರಿಶೀಲನೆಗೆ ಎನ್‌ಟಿಎ ವಿಶೇಷ ಸೂಚನೆ ನೀಡಿದೆ. ಆಧಾರ್ ಹೊರತಾಗಿ ಇತರ ಗುರುತಿನ ದಾಖಲೆ ಬಳಸಿದ ಅಭ್ಯರ್ಥಿಗಳು ಅಥವಾ ಫೋಟೋ ಮಿಸ್‌ಮ್ಯಾಚ್ ಇರುವವರು, ಪ್ರಮಾಣೀಕೃತ ದಾಖಲೆಗಳನ್ನು ಸಲ್ಲಿಸಿ ತಮ್ಮ ಗುರುತನ್ನು ದೃಢೀಕರಿಸಬೇಕಾಗಿದೆ.
ಎನ್‌ಟಿಎ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ, ಕೆಲವು ಅಭ್ಯರ್ಥಿಗಳು ಆಧಾರ್ ಕಾರ್ಡ್ ಹೊರತುಪಡಿಸಿ ಇತರ ಗುರುತಿನ ದಾಖಲೆಗಳನ್ನು ಬಳಸಿ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ, ಅರ್ಜಿ ಪ್ರಕ್ರಿಯೆ ವೇಳೆ ಅಭ್ಯರ್ಥಿಗಳು ತೆಗೆದ ಲೈವ್ ಫೋಟೋಗಳು ಯುಐಡಿಎಐ ದಾಖಲೆಗಳಲ್ಲಿ ಇರುವ ಫೋಟೋಗಳಿಗೆ ಹೊಂದಿಕೆಯಾಗಿಲ್ಲ, ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಪರಿಣಾಮಗೊಂಡ ಅಭ್ಯರ್ಥಿಗಳಿಗೆ ತಮ್ಮ ಗುರುತನ್ನು ದೃಢೀಕರಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಸಹಿ ಮಾಡಲಾದ ಹಾಗೂ ದೃಢೀಕರಿಸಲಾದ ಪ್ರಮಾಣಪತ್ರದೊಂದಿಗೆ ಇತ್ತೀಚಿನ ಫೋಟೋವನ್ನು ತಮ್ಮ ಶಾಲೆ/ಕಾಲೇಜಿನ ಪ್ರಾಂಶುಪಾಲರು ಅಥವಾ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ.

