ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಮಕ್ಕಳ ರಕ್ಷಣಾ ಕಾನೂನು ಹಾಗೂ ರಸ್ತೆ ಸುರಕ್ಷತಾ ಕಾರ್ಯಾಗಾರ

ಕಲ್ಲಡ್ಕ : ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನವೆಂಬರ್ 05 ರಂದು ‘ಮಕ್ಕಳ ರಕ್ಷಣಾ ಕಾನೂನು ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಮಾಹಿತಿ ಕಾರ್ಯಾಗಾರ’ ಯಶಸ್ವಿಯಾಗಿ ನಡೆಯಿತು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಬೆಂಗಳೂರು), ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಮಂಗಳೂರು), ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ಕಾನೂನು ಸಾಕ್ಷರತಾ ಕ್ಲಬ್ (LLC) ಹಾಗೂ ಶಾಲೆಯ ಮಕ್ಕಳ ಸುರಕ್ಷಾ ಸಮಿತಿ (CPC) ಸಹಯೋಗದಲ್ಲಿ ಈ ವಿಶೇಷ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅತಿಥಿಗಳು ಭಾರತಮಾತೆಯ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಕಾನೂನು ಸೇವೆಗಳ ಸಮಿತಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಹರಿಣಿ ಕುಮಾರಿ ಡಿ. ಅವರು,  “ಮಕ್ಕಳು ಸದಾ ಶಿಸ್ತನ್ನು ಪಾಲಿಸಬೇಕು. ತಮಗೆ ಯಾವುದೇ ತೊಂದರೆಯಾದರೂ ತಕ್ಷಣವೇ ಪೋಷಕರು ಅಥವಾ ಶಿಕ್ಷಕರ ಗಮನಕ್ಕೆ ತರಬೇಕು. ಮಕ್ಕಳ ರಕ್ಷಣೆಗೆ ದೇಶದಲ್ಲಿ ಬಲವಾದ ಕಾನೂನು ವ್ಯವಸ್ಥೆ ಇದ್ದು, ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು” ಎಂದರು.

Advertisement

 18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವರ್ತನೆ ತಡೆಯಲು ‘ಪೋಕ್ಸೊ’ (POCSO) ಕಾಯ್ದೆ ಜಾರಿಯಲ್ಲಿದೆ. ಇಂತಹ ಅಪರಾಧ ಎಸಗುವವರಿಗೆ ಪ್ರಕರಣದ ತೀವ್ರತೆ ಆಧರಿಸಿ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.  ಡ್ರಗ್ಸ್ ಹಾಗೂ ಇನ್ನಿತರ ಅಮಲು ಪದಾರ್ಥಗಳ ಸೇವನೆಯ ಅಪಾಯಗಳ ಬಗ್ಗೆ ಮಕ್ಕಳು ಸದಾ ಜಾಗೃತರಾಗಿರಬೇಕು ಎಂದು ಕಿವಿಮಾತು ಹೇಳಿದರು.

ಬಂಟ್ವಾಳ ನಗರ ಠಾಣೆಯ ಮಹಿಳಾ ಕಾನ್ಸ್‌ಟೇಬಲ್ ಪುನೀತಾ ವೈ. ಬಿ. ಅವರು ಮಾತನಾಡಿ, ಶಾಲಾ ವಾಹನಗಳಲ್ಲಿ ಪ್ರಯಾಣಿಸುವಾಗ ಶಿಸ್ತು ಪಾಲಿಸಬೇಕು, ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಹಾಗೂ ರಸ್ತೆ ದಾಟುವಾಗ ಜೀಬ್ರಾ ಕ್ರಾಸಿಂಗ್‌ಗಳನ್ನು ಮಾತ್ರ ಬಳಸಬೇಕು. ಚಾಲಕರು ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು ಎಂದು ತಿಳಿಸಿದರು. ಪರಿಚಯವಿಲ್ಲದ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ವೈಯಕ್ತಿಕ ಫೋಟೋ ಅಥವಾ ವಿಡಿಯೋಗಳನ್ನು ಕಳುಹಿಸಬಾರದು. ಸದ್ಯ ಮೊಬೈಲ್ ಅತಿಯಾದ ಬಳಕೆಯಿಂದಲೇ ಹೆಚ್ಚಿನ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಅತ್ಯಂತ ಎಚ್ಚರಿಕೆಯಿಂದಿರಬೇಕು ಎಂದು ಕರೆ ನೀಡಿದರು.

Advertisement

ಇದನ್ನೂ ಓದಿ: ಕಲ್ಲಡ್ಕ ಶ್ರೀರಾಮ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಸಂಸ್ಕಾರ ಶಿಬಿರ ‘ಉತ್ಥಾನ’ ಉದ್ಘಾಟನೆ: ಸಂಸ್ಕಾರ ಬೆಳೆಸಿಕೊಳ್ಳಲು ಅತಿಥಿಗಳ ಕರೆ!

ಕಾರ್ಯಕ್ರಮದಲ್ಲಿ ಬಂಟ್ವಾಳ ನ್ಯಾಯಾಲಯ ಸಹಾಯಕರು ಚಿತ್ರಾವತಿ, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯೆ ಅಕ್ಷತಾ ಕೊಂಬಿಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಸಹ ಕಾರ್ಯನಿರ್ವಹಣಾಧಿಕಾರಿ ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಮತ್ತು ಸಹ ಮುಖ್ಯೋಪಾಧ್ಯಾಯ ಸುಮಂತ್ ಆಳ್ವ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭೂಮಿಕಾ ಸ್ವಾಗತಿಸಿ, ಸುಧನ್ವ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಗೌರಿನಂದಿನಿ ವಂದನಾರ್ಪಣೆ ಮಾಡಿದರು.

Advertisement

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ