“ಮತ್ತೆ ಹುಟ್ಟಿ ಬಂದರೆ ನನ್ನ ಕೊಟ್ಟಿಗೆಯಲ್ಲೇ ಹುಟ್ಟು ಮಗನೇ…”: ಕಂಬಳದ ಕೋಣ ‘ಪಾಂಡು’ ಅಗಲಿಕೆಗೆ ಕಣ್ಣೀರಿಟ್ಟ ಶ್ರೀಕಾಂತ್ ಭಟ್ರು

ಕಾರ್ಕಳ : ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ, ಕಂಬಳ ಪ್ರಿಯರ ಮನಗೆದ್ದಿದ್ದ ‘ನಂದಳಿಕೆ ಪಾಂಡು’ ಹೆಸರಿನ ಪ್ರಸಿದ್ಧ ಕೋಣ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ. ಕೋಣದ ಅಗಲಿಕೆಯಿಂದ ಕಂಬಳ ಕ್ಷೇತ್ರ ಹಾಗೂ ಮಾಲೀಕ ನಂದಳಿಕೆ ಶ್ರೀಕಾಂತ್ ಭಟ್ ಅವರ ಕುಟುಂಬ ತೀವ್ರ ಶೋಕದಲ್ಲಿ ಮುಳುಗಿದೆ. ತನ್ನ ಸ್ವಂತ ಮಗನಿಗಿಂತ ಹೆಚ್ಚಾಗಿ ಸಾಕಿದ್ದ ಕೋಣ ‘ಪಾಂಡು’ವಿನ ಅಂತ್ಯಕ್ರಿಯೆಯ ವೇಳೆ ಮಾಲೀಕ ನಂದಳಿಕೆ ಶ್ರೀಕಾಂತ್ ಭಟ್ರು ಆಡಿದ ಮಾತುಗಳು ಹಾಗೂ ತೋರಿದ ವಾತ್ಸಲ್ಯ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.

ಕೋಣದ ಅಂತಿಮ ಸಂಸ್ಕಾರದ ವೇಳೆ ಕಣ್ಣೀರಿಡುತ್ತಾ ವಿದಾಯ ಹೇಳಿದ ಶ್ರೀಕಾಂತ್ ಭಟ್ರು, “ಮರುಜನ್ಮ ಅಂತ ಒಂದಿದ್ದು, ನೀನು ಮತ್ತೆ ಕೋಣವಾಗಿಯೇ ಹುಟ್ಟಿ ಬರುವುದಾದರೆ, ನನ್ನ ಕೊಟ್ಟಿಗೆಯಲ್ಲೇ ಹುಟ್ಟಿ ಬಾ… ಓ ನನ್ನ ಚಾಂಪಿಯನ್ ಪಾಂಡು. ನಿನ್ನನ್ನು ಸಾಕುವಾಗ ನನ್ನಿಂದ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿಬಿಡು” ಎಂದು ಕೋಣದ ಮುಖವನ್ನು ಹಿಡಿದು ಕಣ್ಣೀರಿಟ್ಟಿದ್ದಾರೆ. ಸಾಕುಪ್ರಾಣಿ ಹಾಗೂ ಮನುಷ್ಯನ ನಡುವಿನ ಅಪರೂಪದ ಹಾಗೂ ಪವಿತ್ರವಾದ ‘ತಂದೆ-ಮಗನ’ ಬಾಂಧವ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸಾಕುಪ್ರಾಣಿಗಳನ್ನು ಕೇವಲ ಪ್ರಾಣಿಗಳಾಗಿ ನೋಡದೆ, ಕುಟುಂಬದ ಸದಸ್ಯನಂತೆ ಸಲುಹುವ ಕಂಬಳ ಯಜಮಾನರ ಪ್ರೀತಿಯನ್ನು ಈ ದೃಶ್ಯ ಎತ್ತಿಹಿಡಿದಿದೆ.

ಇದನ್ನೂ ಓದಿ: ಇನ್ಮುಂದೆ ಉಪ್ಪಿನ ಪ್ಯಾಕೆಟ್ ಮೇಲೂ ‘ಸಿಗರೇಟ್ ಮಾದರಿ’ ವಾರ್ನಿಂಗ್ ಲೇಬಲ್

ಇಲ್ಲಿದೆ ನೋಡಿ ವಿಡಿಯೋ:


ಕಂಬಳ ಅಂಗಳದ ಅನ್-ಕ್ರೌನ್ಡ್ ಕಿಂಗ್ ‘ಪಾಂಡು’:

ನಂದಳಿಕೆ ಶ್ರೀಕಾಂತ್ ಭಟ್ ಅವರ ಕೊಟ್ಟಿಗೆಯಲ್ಲಿ ಬೆಳೆದ ‘ಪಾಂಡು’, ಜೋಡುಕರೆ ಕಂಬಳಗಳಲ್ಲಿ ಅನೇಕ ಪದಕ ಹಾಗೂ ಚಿನ್ನದ ಪದಕಗಳನ್ನು ಗೆದ್ದುಬಂದಿತ್ತು. ತನ್ನ ವೇಗ ಹಾಗೂ ಗಂಭೀರ ನಡಿಗೆಯಿಂದಲೇ ಕೋಟಿಜೋಡು ಕರೆಗಳಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿತ್ತು. ಭಟ್ರು ತಮ್ಮ ಕೋಣಕ್ಕೆ ವಿದಾಯ ಹೇಳುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದ್ದು, “ಮೃಗೀಯವಾಗಿ ಪ್ರಾಣಿಗಳನ್ನು ಹಿಂಸಿಸುತ್ತಾರೆ ಎಂದು ಆರೋಪಿಸುವ ಯಾವ ‘ಆಕ್ಟಿವಿಸ್ಟ್’ (ಪ್ರಾಣಿ ದಯಾ ಸಂಘಟನೆಗಳ ಕಾರ್ಯಕರ್ತರು)ಗಳಿಗೂ ಈ ನೈಜ ಪ್ರೀತಿ ಮತ್ತು ವಾತ್ಸಲ್ಯ ಅರ್ಥವಾಗಲು ಸಾಧ್ಯವಿಲ್ಲ” ಎಂದು ಕಂಬಳ ಪ್ರೇಮಿಗಳು ಕಮೆಂಟ್ ಮಾಡುವ ಮೂಲಕ ಕಂಬಳ ಮತ್ತು ಕೋಣಗಳ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಎತ್ತಿಹಿಡಿದಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *