ಬೆಂಗಳೂರು: ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ನಾಳೆ (ಏಪ್ರಿಲ್ 7) ಫಲಿತಾಂಶ ಪ್ರಕಟವಾಗಲಿದೆ ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ, ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್‌ನಲ್ಲಿ ನಡೆದಿದ್ದ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆದರೆ, ಮೌಲ್ಯಮಾಪನ ಪ್ರಕ್ರಿಯೆಯ ಸಣ್ಣ ಪುಟ್ಟ ತಾಂತ್ರಿಕ ಕೆಲಸಗಳು ಬಾಕಿ ಇರುವುದರಿಂದ ಫಲಿತಾಂಶದ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಏಪ್ರಿಲ್ ಮೊದಲ ವಾರದಲ್ಲೇ ಫಲಿತಾಂಶ ನೀಡುವುದಾಗಿ ಈ ಹಿಂದೆ ಹೇಳಿದ್ದರು, ಆದರೆ ಈಗ ಇನ್ನೆರಡು ದಿನಗಳ ಕಾಲ ವಿಳಂಬವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ ಪಾದಚಾರಿ ಮಾರ್ಗ ಅತಿಕ್ರಮಣಕಾರರ ವಿರುದ್ಧ ಕ್ರಮಕ್ಕೆ ಸೂಚನೆ, ಬೀಳಲಿದೆ ದಂಡ, ನಡೆಯಲಿದೆ ತೆರವು ಕಾರ್ಯಾಚರಣೆ
ಮಂಡಳಿಯು ಫಲಿತಾಂಶ ಪ್ರಕಟಣೆಯ ಅಧಿಕೃತ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಮೂಲಗಳ ಪ್ರಕಾರ, ಏಪ್ರಿಲ್ 9 ಅಥವಾ 10 ರಂದು ಫಲಿತಾಂಶ ಹೊರಬರುವ ಸಾಧ್ಯತೆಯಿದೆ. ಇದರಿಂದಾಗಿ ಏಳು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತಷ್ಟು ಸಮಯ ಕಾಯುವಂತಾಗಿದೆ.



