ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಾವಣಗೆರೆ ಜಿಲ್ಲೆಯ ಹಲವು ಕ್ಷೇತ್ರಗಳಿಗೆ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಹೆಸರನ್ನು ಮುಂಚಿತವಾಗಿಯೇ ಘೋಷಿಸಿರುವುದು ಸ್ವಪಕ್ಷೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಪಕ್ಷದ ಪ್ರೋಟೋಕಾಲ್ ಮೀರಿ ಯಡಿಯೂರಪ್ಪ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಎಸ್ ವೈ, ಜಿಲ್ಲೆಯ ಏಳು ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾಪಿಸಿದ್ದರು. ಅಷ್ಟೇ ಅಲ್ಲದೆ, ಎಂ.ಪಿ. ರೇಣುಕಾಚಾರ್ಯ ಅವರನ್ನು ಗೆಲ್ಲಿಸಿ ಮಂತ್ರಿ ಮಾಡಲು ಜನರಿಗೆ ಕರೆ ನೀಡಿದ್ದರು. ಇದು ಬಿಜೆಪಿಯ ಜಿಲ್ಲಾ ಮಟ್ಟದ ನಾಯಕರಲ್ಲಿ ಭಾರಿ ಅಸಮಾಧಾನ ಮೂಡಿಸಿದೆ.

ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ‘ಕೇಂದ್ರ ಸಂಸದೀಯ ಮಂಡಳಿ’ ಮಾಡುತ್ತದೆ. ಯಡಿಯೂರಪ್ಪ ಅವರು ಏಕಪಕ್ಷೀಯವಾಗಿ ಹೆಸರು ಘೋಷಿಸುವುದು ಪಕ್ಷದ ಶಿಸ್ತಿಗೆ ವಿರುದ್ಧ ಎಂದು ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಟೀಕಿಸಿದ್ದಾರೆ. ಯಡಿಯೂರಪ್ಪ ಅವರ ಈ ಹಠಾತ್ ನಿರ್ಧಾರವನ್ನು ಗಮನಿಸಿದರೆ, ಅವರು ಬಿಜೆಪಿ ಬಿಟ್ಟು ‘ಪ್ರಾದೇಶಿಕ ಪಕ್ಷ’ ಕಟ್ಟುವ ಉದ್ದೇಶ ಹೊಂದಿದ್ದಾರೆಯೇ? ಎಂಬ ಸಂಶಯವನ್ನು ಕೆಲವು ನಾಯಕರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಗೆ ಸುಪ್ರೀಂ ರಿಲೀಫ್: ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ
ಬಿ.ವೈ. ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ನಾಯಕರಾದ ಜಿ.ಎಂ. ಸಿದ್ದೇಶ್ವರ ಮತ್ತು ಹರಿಹರ ಶಾಸಕ ಬಿ.ಪಿ. ಹರೀಶ್ ಅವರನ್ನು ಹೊನ್ನಾಳಿ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಅಸಮಾಧಾನಕ್ಕೆ ತುಪ್ಪ ಸುರಿದಿದೆ. ಯಡಿಯೂರಪ್ಪ ಅವರ ಈ ಹೇಳಿಕೆಯನ್ನು ಖಂಡಿಸಿ ಮತ್ತು ಮುಂದಿನ ಹಾದಿಯನ್ನು ಚರ್ಚಿಸಲು ಮಾರ್ಚ್ 5 ರಂದು ದಾವಣಗೆರೆಯ ಜಿಎಂಐಟಿ (GMIT) ಅತಿಥಿ ಗೃಹದಲ್ಲಿ ಅತೃಪ್ತ ನಾಯಕರ ಬೃಹತ್ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಇಲ್ಲಿನ ನಿರ್ಧಾರಗಳನ್ನು ಹೈಕಮಾಂಡ್‌ಗೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

