ಮಾದಕ ವಸ್ತುಗಳ ಜಾಲವನ್ನು ಮಟ್ಟ ಹಾಕಲು ಹೊಸ ಪ್ಲಾನ್​ ಮಾಡಿದ ಡಿಜಿಪಿ ಅಲೋಕ್ ಕುಮಾರ್

ರಾಜ್ಯದ ಕಾರಾಗೃಹಗಳಲ್ಲಿ ಬೇರುಬಿಟ್ಟಿರುವ ಮಾದಕ ವಸ್ತುಗಳ ಜಾಲವನ್ನು ಧ್ವಂಸಗೊಳಿಸಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಅತ್ಯಂತ ಕಠಿಣ ಮತ್ತು ಐತಿಹಾಸಿಕ ಕ್ರಮಕ್ಕೆ ಮುಂದಾಗಿದ್ದಾರೆ. ಜೈಲುಗಳ ಒಳಗಿನ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ರಾಜ್ಯದ ಎಲ್ಲಾ ಜೈಲುಗಳಲ್ಲಿನ ಕೈದಿಗಳಿಗೆ ಡ್ರಗ್ಸ್ ಟೆಸ್ಟ್ (Drug Test) ನಡೆಸಲು ಯೋಜನೆ ರೂಪಿಸಲಾಗಿದೆ.

ರಾಜ್ಯದ ಎಲ್ಲಾ ಕೇಂದ್ರ ಮತ್ತು ಜಿಲ್ಲಾ ಕಾರಾಗೃಹಗಳಲ್ಲಿರುವ ವಿಚಾರಣಾಧೀನ ಮತ್ತು ಸಜಾ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಪರಪ್ಪನ ಅಗ್ರಹಾರ ಸೇರಿದಂತೆ ಹಲವು ಜೈಲುಗಳಲ್ಲಿ ಶೇ. 10ರಷ್ಟು ಕೈದಿಗಳಿಗೆ ಪ್ರಾಥಮಿಕವಾಗಿ ಪರೀಕ್ಷೆ ನಡೆಸಲಾಗಿದ್ದು, ಇದನ್ನು ಹಂತ ಹಂತವಾಗಿ ಎಲ್ಲಾ ಕೈದಿಗಳಿಗೆ ವಿಸ್ತರಿಸಲಾಗುವುದು.

Advertisement

ಕೈದಿಗಳ ಮೂತ್ರದ ಮಾದರಿ (Urine samples) ಮತ್ತು ರಕ್ತದ ಮಾದರಿಗಳನ್ನು ಪರೀಕ್ಷಿಸಲು ಬೆಂಗಳೂರಿನ ಖ್ಯಾತ ನಿಮ್ಹಾನ್ಸ್ ಆಸ್ಪತ್ರೆಯ ತಾಂತ್ರಿಕ ಸಹಯೋಗವನ್ನು ಪಡೆಯಲಾಗುತ್ತಿದೆ. ವೈಜ್ಞಾನಿಕವಾಗಿ ಡ್ರಗ್ಸ್ ಸೇವನೆಯನ್ನು ಪತ್ತೆಹಚ್ಚುವುದು ಇದರ ಉದ್ದೇಶ. ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕೈದಿಗಳ ಮೇಲೆ ಕೇವಲ ಕ್ರಿಮಿನಲ್ ಮೊಕದ್ದಮೆ ಹೂಡುವ ಬದಲು, ಅವರಿಗೆ ವ್ಯಸನಮುಕ್ತರಾಗಲು ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ನೀಡಲು ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ: ಜಾಗ ಗುರುತಿಸಿ ಆಗಿದೆ, ಮೆಡಿಕಲ್‌ ಕಾಲೇಜು ಸ್ಥಾಪಿಸಿ: ರಾಜ್ಯ ಸರ್ಕಾರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ

ಜೈಲು ಶಿಕ್ಷೆಯ ನಂತರ ಕೈದಿಗಳು ಸಮಾಜಕ್ಕೆ ಮರಳುವಾಗ ಮಾದಕ ವ್ಯಸನದಿಂದ ಮುಕ್ತರಾಗಿ ಹೊಸ ಜೀವನ ಆರಂಭಿಸುವಂತೆ ಮಾಡುವುದು ಈ ಯೋಜನೆಯ ಮೂಲ ಆಶಯ. ಮಾರ್ಚ್ 9ರಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿಯೊಬ್ಬರು ತನ್ನ ಒಳಉಡುಪಿನಲ್ಲಿ ಮಾದಕ ವಸ್ತುಗಳನ್ನು ಸಾಗಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೇವಲ ಕೈದಿಗಳಲ್ಲದೆ, ಅಕ್ರಮದಲ್ಲಿ ಭಾಗಿಯಾಗುವ ಜೈಲು ಸಿಬ್ಬಂದಿಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಮತ್ತು ವರ್ಗಾವಣೆ ಪ್ರಕ್ರಿಯೆಗಳನ್ನು ಚುರುಕುಗೊಳಿಸಲಾಗಿದೆ.

ಕೈದಿಗಳು ಜೈಲಿನಿಂದ ಬಿಡುಗಡೆಯಾಗುವ ಸಂದರ್ಭದಲ್ಲೂ ಅವರ ಆರೋಗ್ಯ ತಪಾಸಣೆ ಮಾಡಲಾಗುವುದು. ಒಂದು ವೇಳೆ ಅವರ ದೇಹದಲ್ಲಿ ಡ್ರಗ್ಸ್ ಅಂಶ ಪತ್ತೆಯಾದರೆ, ಅಂತಹವರ ವಿರುದ್ಧ ಹೊಸದಾಗಿ ಎಫ್‌ಐಆರ್ (FIR) ದಾಖಲಿಸಲು ಡಿಜಿಪಿ ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು