ಬೆಂಗಳೂರು: ರಾಜ್ಯದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಯೋಜನೆಯೊಂದನ್ನು ರೂಪಿಸಿದೆ. ರೋಗಿಗಳಿಗೆ ಮನೆ ಬಾಗಿಲಲ್ಲೇ ಗುಣಮಟ್ಟದ ಡಯಾಲಿಸಿಸ್ (Dialysis) ಸೇವೆ ನೀಡಲು ಸಿದ್ಧತೆ ನಡೆಸಿದ್ದು, ಈ ಸೇವೆಗಳ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಸಾರ್ವಜನಿಕ ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಿ, ಪ್ರತಿಯೊಬ್ಬ ಕಿಡ್ನಿ ರೋಗಿಗೂ ಸುಲಭವಾಗಿ ಚಿಕಿತ್ಸೆ ದೊರೆಯುವಂತೆ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಗ್ರಾಮೀಣ ಭಾಗಕ್ಕೆ 20 ನಿಮಿಷದಲ್ಲಿ ಆ್ಯಂಬುಲೆನ್ಸ್: 750 ಹೊಸ ವಾಹನಗಳ ಸೇರ್ಪಡೆ!
ಆರೋಗ್ಯ ಇಲಾಖೆಯ ಸಿದ್ಧತೆಗಳ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು, ರಾಜ್ಯಾದ್ಯಂತ ಶೀಘ್ರದಲ್ಲೇ 750 ಅತ್ಯುತ್ತಮ ಗುಣಮಟ್ಟದ ನೂತನ ಆ್ಯಂಬುಲೆನ್ಸ್ಗಳನ್ನು (Ambulance Services) ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಸಂದರ್ಭದಲ್ಲಿ ಕರೆ ಬಂದ ತಕ್ಷಣವೇ ಕೇವಲ 20 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ತಲುಪಬೇಕು ಎಂಬ ಸ್ಪಷ್ಟ ಗುರಿಯನ್ನು ಹೊಂದಲಾಗಿದೆ. ನಿಯಮ ಪಾಲಿಸದಿದ್ದರೆ ₹3,000 ದಂಡ ವಿಧಿಸಲಾಗುವುದು. ಪ್ರತಿ ತಾಲೂಕು ಆಸ್ಪತ್ರೆಯಲ್ಲೂ ತಲಾ 5 ಐಸಿಯು (ICU) ಬೆಡ್ಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ಆಸ್ಪತ್ರೆಗಳನ್ನು ತೆರೆಯುವುದಕ್ಕಿಂತಲೂ ಇರುವ ಆಸ್ಪತ್ರೆಗಳಲ್ಲೇ ಉನ್ನತ ಮಟ್ಟದ ಚಿಕಿತ್ಸೆ ನೀಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು
‘ಮಹಿಳಾ ಆರೋಗ್ಯ ನೀತಿ’ ಶೀಘ್ರ ಜಾರಿ ಮತ್ತು ಔಷಧ ಬೆಲೆ ಇಳಿಕೆಗೆ ಆಗ್ರಹ:
ರಾಜ್ಯದಲ್ಲಿ ಶೀಘ್ರವೇ ನೂತನ ‘ಮಹಿಳಾ ಆರೋಗ್ಯ ನೀತಿ’ ಯನ್ನು ಜಾರಿಗೆ ತರಲಾಗುವುದು. ಮಹಿಳೆಯರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳ ಸಹಕಾರದಿಂದಾಗಿ ಪ್ರಸ್ತುತ ಕ್ಯಾನ್ಸರ್ ಔಷಧಗಳು ಕಡಿಮೆ ದರದಲ್ಲಿ ಸಿಗುವಂತಾಗಿದೆ ಎಂದ ಸಚಿವರು, ಜನಸಾಮಾನ್ಯರ ಆರೋಗ್ಯದ ಕಾಳಜಿಯನ್ನು ಕೇಂದ್ರ ಸರ್ಕಾರ ವಹಿಸಬೇಕು ಎಂದು ಒತ್ತಾಯಿಸಿದರು. “ಔಷಧಗಳ ದರ ನಿಯಂತ್ರಣಕ್ಕೆ ಪ್ರತಿಯೊಂದಕ್ಕೂ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಬೇಕೇಕೆ? ಮುಂದಿನ ದಿನಗಳಲ್ಲಿ ಗಗನಕ್ಕೇರಿರುವ ಔಷಧಿಗಳ ದರಕ್ಕೆ ಕೇಂದ್ರ ಆರೋಗ್ಯ ಇಲಾಖೆ ತಕ್ಷಣವೇ ಕಡಿವಾಣ ಹಾಕಬೇಕು,” ಎಂದು ಅವರು ಆಗ್ರಹಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

