16 ವರ್ಷಗಳ ಕಾನೂನು ಸಮರ ಅಂತ್ಯ: ಸತ್ಯಕ್ಕೆ ಗೆಲುವಾಗಿದೆ, ಭಾರತಕ್ಕೆ ಮರಳಲು ದಿನಗಣನೆ ಶುರು ಎಂದ ಲಲಿತ್ ಮೋದಿ

ದೆಹಲಿ: ಐಪಿಎಲ್ (IPL) ಸಂಸ್ಥಾಪಕ ಲಲಿತ್ ಮೋದಿ 16 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಕೊನೆಗೂ ಭಾರತಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. 2009ರ ದಕ್ಷಿಣ ಆಫ್ರಿಕಾ ಐಪಿಎಲ್ ಆಯೋಜನೆಗೆ ಸಂಬಂಧಿಸಿದ ಫೆಮಾ (FEMA) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ವಿಧಿಸಿದ್ದ ದಂಡ ಹಾಗೂ ಸಮನ್ಸ್ ಸೇರಿದಂತೆ ಎಲ್ಲಾ ಆರೋಪಗಳನ್ನು ಮೇಲ್ಮನವಿ ಪ್ರಾಧಿಕಾರ (Appellate Tribunal) ಸಂಪೂರ್ಣವಾಗಿ ರದ್ದುಗೊಳಿಸಿದ ಬೆನ್ನಲ್ಲೇ ಈ ಪ್ರಮುಖ ಬೆಳವಣಿಗೆ ನಡೆದಿದೆ.

ಮೇಲ್ಮನವಿ ಪ್ರಾಧಿಕಾರದ ಈ ಬಿಗ್ ರಿಲೀಫ್ ತೀರ್ಪಿನ ನಂತರ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪ್ರತಿಕ್ರಿಯಿಸಿ ಸಂತಸ ಹಂಚಿಕೊಂಡಿರುವ ಲಲಿತ್ ಮೋದಿ, “ಕೊನೆಗೂ ಸತ್ಯಕ್ಕೆ ಗೆಲುವಾಗಿದೆ” ಎಂದು ಹೇಳಿದ್ದಾರೆ. ಪ್ರಾಧಿಕಾರದ ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಲಲಿತ್ ಮೋದಿ, ತಮ್ಮ ಟ್ವೀಟ್/ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

“ನನಗೆ ನಿನ್ನೆಯ ತೀರ್ಪಿನಿಂದ ಅತ್ಯಂತ ಸಂತೋಷವಾಗಿದೆ. ಕಳೆದ 16 ವರ್ಷಗಳಿಂದ ನಾನು ಸತತವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಈ ಇಡೀ ಅವಧಿಯಲ್ಲಿ ನಾನು ಮಾಧ್ಯಮಗಳಿಗೆ ಹಾಗೂ ಸಾರ್ವಜನಿಕರಿಗೆ ಏನು ಹೇಳುತ್ತ ಬಂದಿದ್ದೆನೋ, ಕೊನೆಗೂ ಅದೇ ನಿಜವೆಂದು ಸಾಬೀತಾಗಿದೆ. ಟ್ರಿಬ್ಯೂನಲ್ ನನ್ನ ಪರವಾಗಿ ತೀರ್ಪು ನೀಡಿರುವುದು ಸಂತಸ ತಂದಿದೆ. ಐಪಿಎಲ್‌ನ ಒಳಿತನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ಸ್ವಾರ್ಥ ಉದ್ದೇಶವಿರಲಿಲ್ಲ. ಈಗ ಆ ಕಪ್ಪು ಅಧ್ಯಾಯ ಮುಗಿದಿದ್ದು, ಜೀವನದಲ್ಲಿ ಮುನ್ನಡೆಯಲಿದ್ದೇನೆ. ಶೀಘ್ರವೇ ಭಾರತಕ್ಕೆ ಮರಳಲು ಕಾತರನಾಗಿದ್ದೇನೆ.”

ತಮ್ಮ ಭಾರತ ಪ್ರವಾಸದ ಕುರಿತು ಸ್ಪಷ್ಟನೆ ನೀಡಿರುವ ಅವರು, ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ (2027) ಆರಂಭದಲ್ಲಿ ತಾವು ಸ್ವದೇಶಕ್ಕೆ ಮರಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಹೈಡ್ರಾಮಾ: ತೃಣಮೂಲ ಕಾಂಗ್ರೆಸ್ ಶಾಸಕ ಅಮಾನತು

ಏನಿದು 2009ರ ಐಪಿಎಲ್ ಮತ್ತು ಇಡಿ ಪ್ರಕರಣ?

2009ರಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆಗಳು ನಡೆದಿದ್ದ ಕಾರಣದಿಂದ ಭದ್ರತಾ ಕಾರಣಗಳಿಗಾಗಿ ಐಪಿಎಲ್ 2ನೇ ಆವೃತ್ತಿಯ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ರಿಸರ್ವ್ ಬ್ಯಾಂಕ್ (RBI) ಪೂರ್ವಾನುಮತಿ ಇಲ್ಲದೆ ಬರೋಬ್ಬರಿ 243.45 ಕೋಟಿ ರೂ. ವಿದೇಶಿ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ED) ಲಲಿತ್ ಮೋದಿಗೆ ಬೃಹತ್ ದಂಡ ವಿಧಿಸಿತ್ತು.

ಆದರೆ, ಈ ವಿದೇಶಿ ವಿನಿಮಯ ವ್ಯವಹಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಮೇಲ್ಮನವಿ ಪ್ರಾಧಿಕಾರ ಸ್ಪಷ್ಟಪಡಿಸಿದ್ದು, ಇಡಿ ವಿಧಿಸಿದ್ದ ದಂಡವನ್ನು ರದ್ದುಗೊಳಿಸಿದೆ. ಈ ತೀರ್ಪಿನಿಂದಾಗಿ ಲಲಿತ್ ಮೋದಿ ಅವರಿಗೆ ಎದುರಾಗಿದ್ದ ಬಹುದೊಡ್ಡ ಕಾನೂನು ತೊಡಕು ನಿವಾರಣೆಯಾದಂತಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *