ಕಡಬ : ಎಡಮಂಗಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಮಾಜಿ ಸದಸ್ಯೆ ಸುಮ ನೂಜಿಲ ಅವರ ಮನೆಗೆ ಜ.7ರಂದು ಬಂದ ದೊಡ್ಡ ಚಿರತೆಯೊಂದು ಸಾಕುನಾಯಿಯನ್ನು ಕದ್ದೊಯ್ದಿದೆ. ಪಂಜ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಟ್ಟ ಎಡಮಂಗಲ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟುಮಾಡಿದೆ.
ಜ.7ರಂದು ಸುಮ ನೂಜಿಲ ಅವರ ಕುಟುಂಬದವರು ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು. ಸಾಯಂಕಾಲ ಸುಮಾರು 7 ಗಂಟೆಯ ಹೊತ್ತಿಗೆ ಮನೆಗೆ ಚಿರತೆ ಬಂದಿದ್ದು, ಸುಮಾರು ಒಂದು ಗಂಟೆಗಳ ಕಾಲ ಮನೆಯ ಸುತ್ತಮುತ್ತಲೇ ಇದ್ದ ಚಿರತೆ ಸಾಕುನಾಯಿಯನ್ನು ಕಚ್ಚಿಕೊಂಡು ಪರಾರಿಯಾಗಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿ : Bangalore : ರಾಜ್ಯಕ್ಕೆ ಮಳೆಯ ಮುನ್ಸೂಚನೆ: ಬೆಂಗಳೂರಿನ ಮೇಲೆ ವಿಶೇಷ ನಿಗಾ
ಕಳೆದ ಕೆಲ ದಿನಗಳಿಂದ ಈ ಪರಿಸರದಲ್ಲಿ ಸಾಕುನಾಯಿಗಳು ನಿಗೂಢವಾಗಿ ನಾಪತ್ತೆಯಾಗಿದ್ದವು. ಆದರೆ ಆ ಮನೆಗಳಲ್ಲಿ ಸಿಸಿಟಿವಿ ಇಲ್ಲದ ಕಾರಣ ಚಿರತೆಯ ಬಗ್ಗೆ ಯಾರಿಗೂ ಸುಳಿವು ಇರಲಿಲ್ಲ. ಇದೀಗ ಸುಮ ನೂಜಿಲ ಅವರ ಮನೆಯ ಸಿಸಿಟಿವಿಯಿಂದ ಈ ಪರಿಸರದಲ್ಲಿ ಚಿರತೆ ಇರುವುದು ಖಚಿತವಾಗಿದ್ದು, ಈ ಹಿಂದಿನ ನಾಯಿಗಳ ನಾಪತ್ತೆಗೂ ಚಿರತೆ ಕಾರಣವೆಂಬ ಶಂಕೆ ವ್ಯಕ್ತವಾಗಿದೆ.
ಚಿರತೆ ದಾಳಿಯ ಭೀತಿಯಿಂದಾಗಿ ಗ್ರಾಮಸ್ಥರು ಮನೆಯಿಂದ ಹೊರಬರಲು ಹೆದರುತ್ತಿ ದ್ದು, ರಬ್ಬರ್ ಟ್ಯಾಪಿಂಗ್ ಮಾಡಲು ಕಾರ್ಮಿಕರು ತೆರಳುತ್ತಿಲ್ಲ, ಇದು ಕೃಷಿಕರಿಗೆ ಆರ್ಥಿಕ ನಷ್ಟ ತಂದೊಡ್ಡುತ್ತಿದೆ. ಶಾಲಾ ಮಕ್ಕಳು ಮತ್ತು ಕಾರ್ಮಿಕರು ದಿನನಿತ್ಯ ಕಾಡು ಹಾದಿಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇರುವುದರಿಂದ, ಯಾವುದೇ ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

