ಉಡುಪಿ: ರಾಜ್ಯಾದ್ಯಂತ ನಡೆದ ಭ್ರಷ್ಟಾಚಾರ ವಿರೋಧಿ ದೊಡ್ಡ ಕಾರ್ಯಾಚರಣೆಯ ಭಾಗವಾಗಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಶ್ರೀನಿವಾಸ್ ಟಿ.ಎಂ ಅವರ ಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ 8.69 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಮಾರ್ಚ್ 11ರಿಂದ 12ರವರೆಗೆ ಎರಡು ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.

ಭಾರೀ ಪ್ರಮಾಣದ ಸ್ಥಿರಾಸ್ತಿ ಪತ್ತೆ
ದಾಳಿಯ ವೇಳೆ ಅಧಿಕಾರಿಗಳು 11 ಸೈಟ್‌ಗಳು, 6 ವಾಸಸ್ಥ ಮನೆಗಳು ಮತ್ತು 31 ಎಕರೆ ಕೃಷಿ ಭೂಮಿ ಸೇರಿ ಒಟ್ಟು 6,90,64,716 ಮೌಲ್ಯದ ಸ್ಥಿರಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಜಾಗ ಗುರುತಿಸಿ ಆಗಿದೆ, ಮೆಡಿಕಲ್ ಕಾಲೇಜು ಸ್ಥಾಪಿಸಿ: ರಾಜ್ಯ ಸರ್ಕಾರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
ಚರ ಆಸ್ತಿಗಳೂ ಪತ್ತೆ
2,66,90,001 ಮೌಲ್ಯದ ಚರ ಆಸ್ತಿಗಳು ಕೂಡ ಪತ್ತೆಯಾಗಿವೆ. 3,95,941 ನಗದು, 1,47,50,506 ಮೌಲ್ಯದ ಚಿನ್ನಾಭರಣ, 17 ಲಕ್ಷ ಮೌಲ್ಯದ ವಾಹನಗಳು, 25,75,000 ಬ್ಯಾಂಕ್ ಠೇವಣಿಗಳು, 72,68,554 ಮೌಲ್ಯದ ಇತರೆ ವಸ್ತುಗಳು ಪತ್ತೆಯಾಗಿವೆ.
ಈ ಶೋಧ ಕಾರ್ಯವನ್ನು ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

