ಮುಂಬೈ: ಮಹಾರಾಷ್ಟ್ರ ಸರ್ಕಾರವು ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ನೀಡಲಾಗಿದ್ದ 5 ಪ್ರತಿಶತ (5%) ಮೀಸಲಾತಿಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ಈ ಕುರಿತು ಹೊಸ ಆದೇಶವನ್ನು (Government Resolution – GR) ಹೊರಡಿಸಿದೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದ ಹಳೆಯ ಸರ್ಕಾರಿ ಆದೇಶವನ್ನು (GR) ಈಗಿನ ಸರ್ಕಾರ ರದ್ದುಗೊಳಿಸಿದೆ. ಈ 5% ಮೀಸಲಾತಿಯು ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗಗಳ ನೇಮಕಾತಿ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಳಲ್ಲಿ ಜಾರಿಯಲ್ಲಿತ್ತು.
ಬಾಂಬೆ ಹೈಕೋರ್ಟ್ ಈ ಹಿಂದೆ ಮುಸ್ಲಿಮರಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಲು ಅನುಮತಿ ನೀಡಿತ್ತು, ಆದರೆ ಉದ್ಯೋಗಗಳಲ್ಲಿ ಮೀಸಲಾತಿಯನ್ನು ತಡೆಹಿಡಿದಿತ್ತು. ಆದರೆ ಈಗ ಸರ್ಕಾರವು ಸಂಪೂರ್ಣವಾಗಿ ಮೀಸಲಾತಿ ಆದೇಶವನ್ನೇ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದೆ.

ಈ ನಿರ್ಧಾರವು ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಸರ್ಕಾರದ ಈ ಕ್ರಮವನ್ನು “ಅಲ್ಪಸಂಖ್ಯಾತ ವಿರೋಧಿ” ಎಂದು ಟೀಕಿಸಿದ್ದರೆ, ಸರ್ಕಾರವು ಸಂವಿಧಾನದ ಚೌಕಟ್ಟು ಮತ್ತು ಕಾನೂನು ಪ್ರಕ್ರಿಯೆಗಳ ಆಧಾರದ ಮೇಲೆ ಈ ನಿರ್ಧಾರ ತಳೆಯಲಾಗಿದೆ ಎಂದು ಸಮರ್ಥಿಸಿಕೊಂಡಿದೆ. 2014ರಲ್ಲಿ ಅಂದಿನ ಕಾಂಗ್ರೆಸ್-ಎನ್‌ಸಿಪಿ ಸರ್ಕಾರವು ಚುನಾವಣೆಗೂ ಮುನ್ನ ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 5% ಮೀಸಲಾತಿ ನೀಡಲು ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.
ಮೀಸಲಾತಿ ರದ್ದತಿಗೆ ಕಾರಣಗಳೇನು?
ಸಂವಿಧಾನದ ಪ್ರಕಾರ, ಯಾವುದೇ ಸುಗ್ರೀವಾಜ್ಞೆಯು ಹೊರಡಿಸಿದ ಆರು ತಿಂಗಳೊಳಗೆ ಅಥವಾ ಶಾಸನಸಭೆ ಸೇರಿದ ಆರು ವಾರಗಳೊಳಗೆ ಕಾನೂನಾಗಿ (Bill) ಅಂಗೀಕಾರವಾಗಬೇಕು. ೨೦೧೪ರ ಆ ಸುಗ್ರೀವಾಜ್ಞೆಯನ್ನು ನಿಗದಿತ ಸಮಯದೊಳಗೆ (ಡಿಸೆಂಬರ್ 23, 2014) ಕಾನೂನಾಗಿ ಪರಿವರ್ತಿಸಲಾಗಿಲ್ಲ. ಹೀಗಾಗಿ ಅದು ತಾಂತ್ರಿಕವಾಗಿ ರದ್ದಾಗಿತ್ತು. ಸುಗ್ರೀವಾಜ್ಞೆ ರದ್ದಾದ ನಂತರವೂ ಹಳೆಯ ಆದೇಶಗಳ ಆಧಾರದ ಮೇಲೆ ಜಾತಿ ಪ್ರಮಾಣಪತ್ರಗಳು ಮತ್ತು ಮೀಸಲಾತಿ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಈಗ ಸರ್ಕಾರವು ಆ ಹಳೆಯ ಆದೇಶಗಳನ್ನು ಅಮಾನ್ಯಗೊಳಿಸಿ, ಸದ್ಯಕ್ಕೆ ಯಾವುದೇ ಹೊಸ ಮೀಸಲಾತಿ ಕಾನೂನು ಅಸ್ತಿತ್ವದಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸುಳ್ಳು ಜಾಹೀರಾತು ಪ್ರಕರಣ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್
ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ಮುಸ್ಲಿಂ ಸಮುದಾಯಕ್ಕೆ ಈ 5% ಮೀಸಲಾತಿಯ ಅಡಿಯಲ್ಲಿ ಕಾಲೇಜು ಪ್ರವೇಶಾತಿ ಅಥವಾ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಈ ವರ್ಗದ ಅಡಿಯಲ್ಲಿ ನೀಡಲಾಗುತ್ತಿದ್ದ ‘Special Backward Class-A’ (SBC-A) ಪ್ರಮಾಣಪತ್ರಗಳ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಎಐಎಂಐಎಂ (AIMIM) ನಾಯಕ ಇಮ್ತಿಯಾಜ್ ಜಲೀಲ್ ಸೇರಿದಂತೆ ಹಲವು ನಾಯಕರು ಇದನ್ನು “ರಂಜಾನ್ ಉಡುಗೊರೆ” ಎಂದು ವ್ಯಂಗ್ಯವಾಡಿದ್ದಾರೆ ಮತ್ತು ಅಲ್ಪಸಂಖ್ಯಾತರ ಶೈಕ್ಷಣಿಕ ಪ್ರಗತಿಗೆ ಇದು ಮಾರಕ ಎಂದು ಕರೆದಿದ್ದಾರೆ.ಇದು ಕೇವಲ ತಾಂತ್ರಿಕ ಮತ್ತು ಕಾನೂನುಬದ್ಧ ಪ್ರಕ್ರಿಯೆಯಾಗಿದ್ದು, ಸುಗ್ರೀವಾಜ್ಞೆಯನ್ನು ಸರಿಪಡಿಸುವ ಕ್ರಮವಾಗಿದೆ ಎಂದು ಸರ್ಕಾರ ಹೇಳಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

