ಉಡುಪಿ: ಜಿಲ್ಲೆಯ ಮಲ್ಪೆ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸಂಘಪರಿವಾರದ ಮುಖಂಡನ ಮೇಲೆ ಚೂರಿ ದಾಳಿ ನಡೆದಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡವರು ಹಿಂದೂ ಯುವಸೇನೆಯ ಮುಖಂಡ ಮಂಜು ಕೊಳ ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ಮಲ್ಪೆ ಬೀಚ್ ಬಳಿ ಪ್ರೇಮ ಸಂಬಂಧಿತ ವಿಚಾರದಲ್ಲಿ ರಾಜಿ ಪಂಚಾಯಿತಿ ನಡೆಸಲು ಮಂಜು ತೆರಳಿದ್ದರು ಎನ್ನಲಾಗಿದೆ. ಧನುಷ್ ಎಂಬ ಯುವಕನಿಗೆ ಸಂಬಂಧಿಸಿದ ವಿಷಯವಾಗಿ ಮಾತಿನ ಚಕಮಕಿ ನಡೆದು, ಅದು ತೀವ್ರ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ: ತಂದೆಯನ್ನೇ ಕೊಡಲಿಯಿಂದ ಕಡಿದು ಕೊಂದು, ಟ್ಯಾಂಕ್‌ಗೆ ಶವ ಎಸೆದು ಬಿರಿಯಾನಿ ತಿಂದ ಮಗ!
ಈ ವೇಳೆ ಯುವಕರ ತಂಡದಲ್ಲಿದ್ದ ಒಬ್ಬರು ಏಕಾಏಕಿ ಚಾಕುವಿನಿಂದ ಮಂಜು ಅವರ ಹೊಟ್ಟೆಗೆ ಇರಿದಿದ್ದಾರೆ. ದಾಳಿಯ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಮಂಜು ಕೊಳ ಅವರನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿ ಮಲ್ಪೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಪಲಿಮಾರು ನಿವಾಸಿಗಳಾದ ಪ್ರಜ್ಞೇಶ್, ಪುನೀತ್, ಅಮೃತ್ ಭಂಡಾರಿ, ಅಭಿಜಿತ್ ಸೇರಿದಂತೆ ಇನ್ನೊಬ್ಬ ಯುವಕನನ್ನು ಬಂಧಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

