Breaking News

Shocking: ಕೇರಳದ ವಿಡಿಯೋ ಘಟನೆ ಮಾಸುವ ಮುನ್ನ ಕಾರವಾರದಲ್ಲಿ ಮತ್ತೊಂದು ಘಟನೆ

ಕಾರವಾರ: ಕೇರಳದಲ್ಲಿ ಯೂಟ್ಯೂಬರ್ ಒಬ್ಬಳು ವ್ಯಕ್ತಿಯ ಮೇಲೆ ವಿಡಿಯೋ ಮಾಡಿ ಮಾನಹಾನಿ ಮಾಡಿದ್ದರಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಈಗ ಅದು ಮಾಸುವ ಮುನ್ನವೇ ಕರ್ನಾಟಕದಲ್ಲಿ ಅಂತಹ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪ್ರತಿಷ್ಠಿತ ಪಿಕಳೆ ನರ್ಸಿಂಗ್ ಹೋಂನ ಹಿರಿಯ ಸಿಬ್ಬಂದಿಯೊಬ್ಬರು ಅಂಕೋಲಾ ತಾಲೂಕಿನ ಅವರ್ಸಾದಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಕಾರವಾರ ನಗರಸಭೆಯ ಮಾಜಿ ಅಧ್ಯಕ್ಷ ಡಾ. ನಿತಿನ್ ಪಿಕಳೆ ಅವರ ಸಂಬಂಧಿ ರಾಜು ಪಿಕಳೆ ಎಂದು ಗುರುತಿಸಲಾಗಿದೆ.

Advertisement

ಘಟನೆಯ ಹಿನ್ನೆಲೆ:
ರಾಜು ಪಿಕಳೆ ಅವರು ಕಾರವಾರದ ಪಿಕಳೆ ನರ್ಸಿಂಗ್ ಹೋಂನ ಔಷಧಿ ವಿತರಣಾ ವಿಭಾಗದಲ್ಲಿ ಹಲವು ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಆದರೆ, ಸುಮಾರು 15 ದಿನಗಳ ಹಿಂದೆ ಅಪರಿಚಿತ ರೋಗಿಯ ಸಂಬಂಧಿಯೊಬ್ಬರು ರಾಜು ಪಿಕಳೆ ಅವರು ಅವಧಿ ಮೀರಿದ (Expired) ಮಾತ್ರೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ, ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.

ಇದನ್ನೂ ಓದಿ: ಪುತ್ತೂರು ಕಂಬಳ : 125ಮೀ ಓಡಿ ಗಮನ ಸೆಳೆದ ಸುಳ್ಯದ 73ರ ವೃದ್ಧ

ಮಾನಸಿಕ ಖಿನ್ನತೆ ಮತ್ತು ಕ್ಷಮೆಯಾಚನೆ
ವಿಡಿಯೋ ವೈರಲ್ ಆದ ನಂತರ ರಾಜು ಪಿಕಳೆ ಅವರು ತೀವ್ರವಾಗಿ ನೊಂದಿದ್ದರು. ಇದು ಕೇವಲ ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಅವರು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳು ಮತ್ತು ತೇಜೋವಧೆಯಿಂದ, ಕಳೆದ ಎರಡು ವಾರಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ.

ದುರಂತದ ವಿವರ
ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಅಂಗಳದ ತುಳಸಿಕಟ್ಟೆಯ ಮುಂಭಾಗವೇ ರಾಜು ಪಿಕಳೆ ಅವರು ಡಬಲ್ ಬ್ಯಾರಲ್ ಗನ್‌ನಿಂದ ಶೂಟ್ ಮಾಡಿಕೊಂಡು ಬದುಕನ್ನು ಕೊನೆಗೊಳಿಸಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿ ಅಕ್ಕಪಕ್ಕದವರು ಧಾವಿಸಿ ಬರುವಷ್ಟರಲ್ಲೇ ಕೊನೆಯುಸಿರೆಳೆದಿದ್ದರು. ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದ ವ್ಯಕ್ತಿ, ಕೇವಲ ಒಂದು ವಿಡಿಯೋ ವೈರಲ್ ಆದ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದು ಜಿಲ್ಲೆಯಾದ್ಯಂತ ವಿಷಾದ ಮೂಡಿಸಿದೆ.

ಪೊಲೀಸ್ ಭೇಟಿ ಮತ್ತು ತನಿಖೆ
ವಿಷಯ ತಿಳಿಯುತ್ತಿದ್ದಂತೆಯೇ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಡಬಲ್ ಬ್ಯಾರಲ್ ಗನ್ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವಿಡಿಯೋಗಳು ವ್ಯಕ್ತಿಯ ಜೀವನದ ಮೇಲೆ ಎಂತಹ ಭೀಕರ ಪರಿಣಾಮ ಬೀರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು