ಮಂಡ್ಯ : ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಗಂಡನನ್ನು ತೊರೆದು ಪ್ರೇಮಿಯೊಂದಿಗೆ ಹೋದ ಮಹಿಳೆಯೊಬ್ಬಳು, ಪ್ರೇಮಿಯ ಜೊತೆ ಸೇರಿ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಟ್ರ್ಯಾಕ್‌ನಲ್ಲಿ ನಡೆದಿದೆ.
ಬೆಂಗಳೂರು ಮೂಲದ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಮೃತರ ಸಂಬಂಧಿಕರಿಗೆ ಮಾಹಿತಿ ರವಾನಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಸಹನಾ 8 ವರ್ಷಗಳ ಹಿಂದೆ ವೀರೇಶ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ 6 ವರ್ಷದ ಹೆಣ್ಣು ಮಗು ಹಾಗೂ 2 ವರ್ಷದ ಗಂಡು ಮಗುವಿದೆ. ಆಟೋ ಚಾಲಕನಾಗಿದ್ದ ವೀರೇಶ್, ಪತ್ನಿ ಮತ್ತು ಮಕ್ಕಳೊಂದಿಗೆ ಕಳೆದ 2-3 ವರ್ಷಗಳಿಂದ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ವಾಸವಾಗಿದ್ದ. ದಂಪತಿ ವಾಸವಿದ್ದ ಕಟ್ಟಡದಲ್ಲೇ ರಾಹುಲ್ ಕೂಡ ವಾಸವಾಗಿದ್ದ. ಮದುವೆಯಾಗಿ ಮಕ್ಕಳಿದ್ದರೂ ಸಹನಾ ರಾಹುಲ್ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಈ ಪರಿಚಯ ಬಳಿಕ ಅಕ್ರಮ ಸಂಬಂಧಕ್ಕೆ ತಿರುಗಿತ್ತು.
ಇದನ್ನೂ ಓದಿ: ಗಂಡನಿಗೆ ಡಿವೋರ್ಸ್ ಕೊಟ್ಟು ಪ್ರಿಯಕರನ ಮನೆಗೆ ಬಂದರೆ ಕೈಕೊಟ್ಟು ಪರಾರಿ

ಈ ವಿಚಾರ ತಿಳಿಯುತ್ತಿದ್ದಂತೆ ಪತಿ ವೀರೇಶ್ ಮಾದನಾಯಕನಹಳ್ಳಿ ತೊರೆದು ಬೇರೆಡೆ ಮನೆ ಮಾಡಿದ್ದ. ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ರಾಜೀ ಪಂಚಾಯಿತಿ ನಡೆಸಿ, ರಾಹುಲ್ ಸಾಹಸ ಬಿಡುವಂತೆ ಸಹನಾಗೆ ಬುದ್ಧಿಹೇಳಲಾಗಿತ್ತು. ಆದರೆ ಸಹನಾ ತನ್ನ ನಡವಳಿಕೆಯನ್ನು ತಿದ್ದಿಕೊಂಡಿರಲಿಲ್ಲ.
ಸೋಮವಾರ ಪತಿ-ಪತ್ನಿ ನಡುವೆ ಮತ್ತೆ ಇದೇ ವಿಚಾರಕ್ಕೆ ತೀವ್ರ ಜಗಳ ನಡೆದಿದೆ. ಈ ವೇಳೆ ತಾನು ರಾಹುಲ್ ಜೊತೆಯಲ್ಲೇ ಇರುವುದಾಗಿ ಸಹನಾ ಪಟ್ಟು ಹಿಡಿದಿದ್ದಳು. ಇದರಿಂದ ಆಕ್ರೋಶಗೊಂಡ ವೀರೇಶ್, “ನಿಮ್ಮಿಬ್ಬರನ್ನು ನೆಮ್ಮದಿಯಾಗಿ ಬಾಳಲು ಬಿಡುವುದಿಲ್ಲ” ಎಂದು ಗದರಿಸಿದ್ದನು.

ಇದರಿಂದ ಹೆದರಿದ ಸಹನಾ ಗಂಡನ ಮನೆ ತೊರೆದು ಮಂಡ್ಯ ಜಿಲ್ಲೆಯ ಗುನ್ನಾಯಕನಹಳ್ಳಿಯಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದಳು. ಗುರುವಾರ ರಾಹುಲ್ ಗುನ್ನಾಯಕನಹಳ್ಳಿಗೆ ಆಗಮಿಸಿ ಸಹನಾಳನ್ನು ಕರೆದುಕೊಂಡು ಹೋಗಿದ್ದನು. ಪತಿ ವೀರೇಶ್ ವಿರುದ್ಧ ಪೊಲೀಸ್ ದೂರು ನೀಡಲು ಇಬ್ಬರೂ ಯೋಚಿಸಿದ್ದರೂ, “ವೀರೇಶ್ ನಮ್ಮನ್ನು ಜೀವಂತವಾಗಿ ಬಾಳಲು ಬಿಡುವುದಿಲ್ಲ” ಎಂಬ ಭೀತಿಯಿಂದ ಮನನೊಂದು ಶುಕ್ರವಾರ ಬೆಳಿಗ್ಗೆ ವಿಸಿ ಫಾರಂ ರಸ್ತೆಯ ರೈಲು ಹಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

