ಮುಂಬೈ: ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಸಚಿವ ನರಹರಿ ಜಿರ್ವಾಳ್ ಅವರು ತೃತೀಯಲಿಂಗಿಯೊಬ್ಬರ ಜೊತೆಗಿರುವ ಆಕ್ಷೇಪಾರ್ಹ ವೀಡಿಯೊವೊಂದು ಬಹಿರಂಗವಾಗಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಘಟನೆಯ ಬೆನ್ನಲ್ಲೇ ಸಚಿವರ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ.
ವೈರಲ್ ಆಗಿರುವ ವೀಡಿಯೊ ಸಚಿವರ ಅಧಿಕೃತ ನಿವಾಸದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ ಸಚಿವರು ತೃತೀಯಲಿಂಗಿಯೊಬ್ಬರ ಜೊತೆ ಮಲಗಿರುವ ದೃಶ್ಯವಿದ್ದು, ಮದ್ಯದ ಬಾಟಲಿಗಳು ಸಹ ಕಂಡುಬಂದಿವೆ ಎಂದು ವರದಿಯಾಗಿದೆ. ವೀಡಿಯೊದಲ್ಲಿರುವ ವ್ಯಕ್ತಿ ರಾಜ್ಯದ ಮೊದಲ ತೃತೀಯಲಿಂಗಿ ವಕೀಲ ಪವನ್ ಯಾದವ್ ಎಂದು ಗುರುತಿಸಲಾಗಿದೆ.

ಈ ಆರೋಪಗಳನ್ನು ನರಹರಿ ಜಿರ್ವಾಳ್ ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. “ಇದು ನನ್ನ ವಿರುದ್ಧದ ವ್ಯವಸ್ಥಿತ ಪಿತೂರಿ. ಈ ವೀಡಿಯೊವನ್ನು ಎಡಿಟ್ ಮಾಡಿ ತಯಾರಿಸಲಾಗಿದೆ (Doctored Video). ನನ್ನನ್ನು ಬ್ಲ್ಯಾಕ್ಮೇಲ್ ಮಾಡುವ ಉದ್ದೇಶದಿಂದ ಹಳೆಯ ವೀಡಿಯೊಗಳನ್ನು ಒಟ್ಟುಗೂಡಿಸಿ ವೈರಲ್ ಮಾಡಲಾಗಿದೆ” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ತಾನು ಮದ್ಯಪಾನ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ತೊಕ್ಕೊಟ್ಟು ಫ್ಲೈಓವರ್ ಮೇಲೆ ರೌಡಿಶೀಟರ್ ಹತ್ಯೆ! ಹಗಲು ಹೊತ್ತಲ್ಲೇ ಗ್ಯಾಂಗ್ ವಾರ್ ಶಂಕೆ
ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ನಾಯಕರು ಈ ಘಟನೆಯನ್ನು ಖಂಡಿಸಿದ್ದು, ಸಚಿವರ ನೈತಿಕ ಪತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಎನ್ಸಿಪಿ ಅಧ್ಯಕ್ಷೆ ಸುನೇತ್ರಾ ಪವಾರ್ ಅವರ ಮೇಲೆ ಜಿರ್ವಾಳ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಡ ಹೆಚ್ಚುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

