ನವದೆಹಲಿ: ಆರ್‌ಎಸ್‌ಎಸ್‌ನ 100 ವರ್ಷಗಳ ಪ್ರಯಾಣವನ್ನು ವಿವರಿಸುವ ಮುಂಬರುವ ಚಲನಚಿತ್ರ ಶತಕ್‌ನ ಹಾಡಿನ ಆಲ್ಬಮ್ ಬಿಡುಗಡೆಗೊಂಡಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸರಸಂಘಚಾಲಕ ಮೋಹನ್ ಭಾಗವತ್, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಬದಲಾಗುತ್ತಿಲ್ಲ, ಬದಲಾಗಿ ಕಾಲಕ್ರಮೇಣ ವಿಕಸನಗೊಳ್ಳುತ್ತಿದೆ ಎಂದರು.
“ಸಂಘ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿದೆ. ಆದರೆ ಸಂಸ್ಥೆ ವಿಕಸನಗೊಂಡು ಹೊಸ ರೂಪಗಳನ್ನು ಪಡೆದುಕೊಂಡಂತೆ, ಜನರು ಅದನ್ನು ಬದಲಾಗುತ್ತಿದೆ ಎಂದು ಗ್ರಹಿಸುತ್ತಾರೆ. ವಾಸ್ತವವಾಗಿ ಬದಲಾಗುತ್ತಿಲ್ಲ. ಅದು ಕ್ರಮೇಣವಾಗಿ ವಿಕಸಿತಗೊಳ್ಳುತ್ತಿದೆ ಎಂದರು.

ಇದನ್ನೂ ಓದಿ: ಅಯೋಧ್ಯೆ ಶ್ರೀ ರಾಮ ಮಂದಿರದ ಸುತ್ತಮುತ್ತ ಮಾಂಸಹಾರ ಸೇವನೆಗಿಲ್ಲ ಅವಕಾಶ
ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಒಬ್ಬ ದೇಶಭಕ್ತ ಮತ್ತು ಅವರು ಬಾಲ್ಯದಲ್ಲಿಯೇ ರಾಷ್ಟ್ರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಹೆಡ್ಗೆವಾರ್ ಅವರ ಪೋಷಕರು ಪ್ಲೇಗ್‌ನಿಂದ ಸಾವನ್ನಪ್ಪಿದಾಗ ಅವರಿಗೆ ಕೇವಲ 11 ವರ್ಷ ವಯಸ್ಸಾಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಂತಹ ದೊಡ್ಡ ಆಘಾತ ಸಂಭವಿಸಿದಾಗ ಒಂಟಿಯಾಗುತ್ತಾರೆ. ಆದರೆ, ದೊಡ್ಡ ಆಘಾತಗಳನ್ನು ಸಹ ತಡೆದುಕೊಳ್ಳುವ ಸಾಮರ್ಥ್ಯ ಅವರಲ್ಲಿತ್ತು ಎಂದರು.
“ಡಾಕ್ಟರ್ ಸಾಹೇಬ್ (ಹೆಡ್ಗೆವಾರ್) ಅವರ ಮನೋವಿಜ್ಞಾನವು ಅಧ್ಯಯನ ಮತ್ತು ಸಂಶೋಧನೆಯ ವಿಷಯವಾಗಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗಾಯಕ ಸುಖ್ವಿಂದರ್ ಸಿಂಗ್, ನಿರ್ದೇಶಕ ಆಶಿಶ್ ಮಾಲ್, ಸಹ-ನಿರ್ಮಾಪಕ ಆಶಿಶ್ ತಿವಾರಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತ ಭಯ್ಯಾಜಿ ಜೋಶಿ ಉಪಸ್ಥಿತರಿದ್ದರು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

