ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.22 ರಂದು ಮಹಿಳೆಯರಿಂದ ಕುಂಕುಮಾರ್ಚನೆ ಸೇವೆ ನಡೆಯಿತು. ಬಳಿಕ ದೇವಸ್ಥಾನ ಹಾಗೂ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸಾರ್ವಜನಿಕ ಸೇವೆಗೆ ಮಹತ್ವದ ಹೆಜ್ಜೆಯಾಗಿ ‘ದುರ್ಗಿ’ ಎಂಬ ಉಚಿತ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲಾಯಿತು.


ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಣ್ ಎಂ.ಎಂ. ಅವರು ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಂಬುಲೆನ್ಸ್ ಅತಿಮುಖ್ಯವಾಗಿದೆ. ಉಚಿತ ಆಂಬುಲೆನ್ಸ್ ಸೇವೆ ಬಡವರಿಗೆ ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ: ಮೋಂತಿಮಾರು ಶ್ರೀ ಕ್ಷೇತ್ರದಲ್ಲಿ ಮಾ.23ರಿಂದ ವಾರ್ಷಿಕ ಜಾತ್ರಾ ಮಹೋತ್ಸವ, ಜೈ ಹನುಮಾನ್ ಸಿನಿ ನಾಟಕ ಪ್ರದರ್ಶನ

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಮೋಂತಿಮಾರು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಸಹಕಾರ ರತ್ನ ಸತೀಶ್ಚಂದ್ರ ಎಸ್.ಆರ್. ಮಾತನಾಡಿ, ಐದು ವರ್ಷಗಳ ಹಿಂದೆಯೇ ಆಂಬುಲೆನ್ಸ್ ಸೇವೆ ಪ್ರಾರಂಭಿಸುವ ಬಗ್ಗೆ ಯೋಚಿಸಲಾಗಿತ್ತು. ಇದೀಗ ದೇವಿಯ ಆಶೀರ್ವಾದದಿಂದ ಉಚಿತ ಆಂಬುಲೆನ್ಸ್ ಸೇವೆ ಪ್ರಾರಂಭಗೊಂಡಿದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಮಂಚಿ-ಕೊಳ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಉಮಾನಾಥ ರೈ ಮಾತನಾಡಿ, ಮಂಚಿ ಗ್ರಾಮದ ಎರಡನೇ ಆಂಬುಲೆನ್ಸ್ ಇದಾಗಿದೆ ಎಂದು ಹೇಳಿ ಆಂಬುಲೆನ್ಸ್ ಸೇವೆಯ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಆರ್.ಸತೀಶ್ಚಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಆಡಳಿತ ಸಹ ಮೊಕ್ತೇಸರ ಗಣೇಶ್ ಕಾಮತ್, ಅಂಬಿಕ ಮಂಡಳಿಯ ಅಧ್ಯಕ್ಷ ದೀಕ್ಷಿತ್ ಶೆಟ್ಟಿ, ಯೋಧ ಅಭಿಷೇಕ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷ್ಣಪ್ರಶಾಂತ್ ಸ್ವಾಗತಿಸಿ, ದೇವಾಲಯದ ಅರ್ಚಕ ರೋಹಿತ್ ಭಟ್ ಪ್ರಾರ್ಥಿಸಿದರು. ಹರಿಪ್ರಸಾದ್ ನಿರೂಪಿಸಿದರು.
ತುರ್ತು ಸೇವೆಗಾಗಿ ಸಾರ್ವಜನಿಕರು 8904227771 ಸಂಪರ್ಕಿಸಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

