ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಶ್ರೀ ಕ್ಷೇತ್ರ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜ.೩ರಂದು ನಡೆಯಲಿರುವ ಪ್ರತಿಷ್ಠಾ ವರ್ಧಂತಿ ಉತ್ಸವದ ಪ್ರಯುಕ್ತ ಭಕ್ತರು ಜ.1 ರಂದು ಹೊರೆಕಾಣಿಕೆ ಸಮರ್ಪಿಸಿದರು.
ವಿವಿಧ ಊರುಗಳಿಂದ ಭಕ್ತರು ಸಮರ್ಪಿಸಿದ ಹೊರೆಕಾಣಿಕೆಯನ್ನು ಸ್ವಯಂಸೇವಕರು ವಾಹನಗಳ ಮೂಲಕ ಸಂಗ್ರಹಿಸಿ ಮಂಚಿಯಲ್ಲಿರುವ ಮೋಂತಿಮಾರು ದೇವಾಲಯದ ದ್ವಾರದ ಬಳಿ ಸೇರಿದರು. ಅನೇಕರು ತಮ್ಮ ವಾಹನಗಳಲ್ಲಿ ಹೊರೆಕಾಣಿಕೆಯನ್ನು ತಂದು ದ್ವಾರದ ಬಳಿ ಜೊತೆಗೂಡಿದರು. ಬಳಿಕ ಮೆರವಣಿಗೆ ಮೂಲಕ ಹಸಿರು ಹೊರೆಕಾಣಿಕೆಯನ್ನು ದೇವಾಲಯಕ್ಕೆ ಸಾಗಿಸಿ ಸಮರ್ಪಿಸಲಾಯಿತು. ದ್ವಿಚಕ್ರ ವಾಹನಗಳು ಕೂಡ ಮೆರವಣಿಗೆಯಲ್ಲಿ ಸಾಗಿದವು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಈ ವರ್ಷದ ದೇವಾಲಯದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ದೇವಾಲಯದ ಆಡಳಿತ ಮಂಡಳಿ ಮೊಕ್ತೇಸರ ಸತೀಶ್ಚಂದ್ರ ಎಸ್.ಆರ್., ಬ್ರಹ್ಮಕಲಶೋತ್ಸವದಂತೆ ಈ ಬಾರಿಯ ಪ್ರತಿಷ್ಠಾ ವರ್ಧಂತಿಯನ್ನು ನಡೆಸಲಾಗುತ್ತದೆ. ಬಿಡುಗಡೆಗೊಳಿಸಲಾದ ಕ್ಯಾಲೆಂಡರ್ ನಲ್ಲಿ ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ ಲಭ್ಯವಾಗಲಿದೆ ಎಂದರು.

ಅತ್ಯಂತ ವಿರಳವಾಗಿ ನಡೆಯುವ ರಾಷ್ಟ್ರ ವಿಜಯ ಯಾಗ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ದೇಶ, ಪ್ರಧಾನಿ ನರೇಂದ್ರ ಮೋದಿ ಅವರ ರಕ್ಷಣೆಗಾಗಿ ಈ ಯಾಗ ನಡೆಸಲಾಗುತ್ತದೆ. ಅದೇ ರೀತಿ ಭಜನಾ ಕಮ್ಮಟವೂ ಆಯೋಜಿಸಲಾಗಿದೆ. ಉತ್ಸವವೂ ನಡೆಯಲಿದೆ. ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇನೆ ಎಂದರು.

ಪ್ರತಿಷ್ಠಾ ವರ್ಧಂತಿ ಉತ್ಸವ, ರಾಷ್ಟ್ರ ವಿಜಯ ಯಜ್ಞ, ಭಜನಾ ಕಮ್ಮಟ
ಜ.೩ ರಂದು ಮೋಂತಿಮಾರು ಶ್ರೀ ಕ್ಷೇತ್ರದಲ್ಲಿ ವರ್ಧಂತಿ ಉತ್ಸವ ನಡೆಯಲಿದ್ದು, ಈ ಪ್ರಯುಕ್ತ ಭಜನಾ ಕಮ್ಮಟ ಹಾಗೂ ರಾಷ್ಟ್ರ ವಿಜಯ ಯಜ್ಞ ನೆರವೇರಲಿದೆ. ಬೆಳಗ್ಗೆ ೭ ಗಂಟೆಗೆ ರಾಷ್ಟ್ರ ವಿಜಯ ಯಜ್ಞ ಪ್ರಾರಂಭಗೊಳ್ಳಲಿದ್ದು, ಸಂಜೆ ಭಜನಾ ಕಮ್ಮಟ ನಡೆಯಲಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಭಜನಾ ಕಮ್ಮಟ ಗಾಯನ ನಡೆಯಲಿದೆ. ದೇವಾಲಯದ ಜಾತ್ರೋತ್ಸವದ ಪ್ರಯುಕ್ತ ಭಜನಾ ಕಮ್ಮಟ ಆಯೋಜಿಸಲಾಗುತ್ತದೆ. ಇದು ಈ ಬಾರಿಯ ವಿಶೇಷ ಆಕರ್ಷಣೆಯೂ ಹೌದು. ಜಿಲ್ಲೆಯ ಪ್ರಸಿದ್ಧ ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಕುಣಿತ ಭಜನೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ರಾತ್ರಿ 10.30 ರಿಂದ ಬಪ್ಪನಾಡು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ರಾತ್ರಿ ಅಮ್ಮನವರ ಪಲ್ಲಕ್ಕಿ ಉತ್ಸವ ಚಂಡೆ, ವಾದ್ಯ, ಭಜನೆಯೊಂದಿಗೆ ನಡೆಯಲಿದ್ದು, ದರ್ಶನ ಬಲಿಯೂ ಇರಲಿದೆ. ಸಿಡು ಮದ್ದು ಪ್ರದರ್ಶನ ವಿಶೇಷ ಆಕರ್ಷಣೆಯಾಗಿರಲಿದೆ.
ಉತ್ಸವ ಬಲಿ ನಂತರ ಜಗನ್ಮಾತೆಯು ಮತ್ತೆ ಗರ್ಭಗುಡಿಗೆ ಪ್ರವೇಶಿಸಲಿದ್ದು, ಬಳಿಕ ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಎಂದಿನಂತೆ ಇಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಭಕ್ತರ ಪಾಲಿನ ಅನ್ನಪೂರ್ಣೇಶ್ವರಿಯೂ ಆಗಿರುವ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಿತ್ಯ ಅನ್ನಸಂತರ್ಪಣೆ ನಡೆಯುವುದು ವಿಶೇಷವಾಗಿದೆ.

