ಮಂಗಳೂರು: ಸಮೀಪದ ಗುರುಪುರದ ಮಣಿಬೆಟ್ಟಿನಲ್ಲಿ ಏಪ್ರಿಲ್ 4ರಂದು ಮೂರನೇ ವರ್ಷದ ಫ್ಲಡ್‌ಲೈಟ್ ‘ಮೂಲೂರು–ಅಡ್ಡೂರು ಜೋಡುಕರೆ ಕಂಬಳ’ ಭವ್ಯವಾಗಿ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್ ಅಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳ ಕೇವಲ ಕ್ರೀಡೆಯಲ್ಲ, ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ ಎಂದು ಹೇಳಿದರು. ಈ ಕ್ರೀಡೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಕಾರ್ಯಕ್ರಮವು ಬೆಳಗ್ಗೆ 8:30ಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರಿಂದ ಉದ್ಘಾಟನೆಯಾಗಲಿದೆ. ಸಂಜೆ 6:30ಕ್ಕೆ ನಡೆಯುವ ಕಾರ್ಯಕ್ರಮವನ್ನು ಮಾಜಿ ಸಂಸದ ಡಿ.ಕೆ. ಸುರೇಶ್ ಉದ್ಘಾಟಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಭಾಗವಹಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ಉಪ್ಪಿನಂಗಡಿ: ಮಾ. 28ಕ್ಕೆ 40ನೇ ವರ್ಷದ ಭವ್ಯ ‘ಉಬಾರ್ ಕಂಬಳ’; 150ಕ್ಕೂ ಅಧಿಕ ಜೋಡಿ ಕೋಣಗಳ ಜಿದ್ದಾಜಿದ್ದಿ!
ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲೀಕರಿಗೆ ಬೆಳ್ಳಿ ನಾಣ್ಯ ಹಾಗೂ 30 ಕೆಜಿ ಹುರಳಿ ನೀಡಲಾಗುವುದು. ಕಣೆಹಲಗೆ ವಿಭಾಗದಲ್ಲಿ ನಿಗದಿತ ಎತ್ತರಕ್ಕೆ ನೀರು ಚಿಮ್ಮಿಸಿದ ಕೋಣಗಳಿಗೆ 1 ಗ್ರಾಂ ಬಂಗಾರದ ಪದಕ ನೀಡಲಾಗುತ್ತದೆ.
ಈ ಬಾರಿ ಕಂಬಳ ಸ್ಪರ್ಧೆಯಲ್ಲಿ ಸೆನ್ಸಾರ್ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದ್ದು, ಸ್ಪರ್ಧೆಯ ಸಮಯ ಮತ್ತು ಫಲಿತಾಂಶಗಳಲ್ಲಿ ನಿಖರತೆ ಹೆಚ್ಚಿಸಲಾಗುತ್ತದೆ. ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಆಹಾರ ಮೇಳ, ಕೇರಳದ ಚೆಂಡೆ ವಾದನ ಹಾಗೂ ಪಟಾಕಿ ಪ್ರದರ್ಶನವೂ ನಡೆಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

