Breaking News

Mumbai : ಮುಂಬೈ ಪಾಲಿಕೆ ಬಿಜೆಪಿ ಮೈತ್ರಿ ತೆಕ್ಕೆಗೆ: ಠಾಕ್ರೆ ಪ್ರಾಬಲ್ಯ ಅಂತ್ಯ, ಕಾಂಗ್ರೆಸ್‌ಗೆ ಮತ ವಿಭಜನೆಯ ಹೊಡೆತ

ಮುಂಬೈ : ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಹಾಗೂ ಪ್ರತಿಷ್ಠೆಯ ಕಣವಾಗಿದ್ದ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದ್ದಿದೆ. ಅದರಂತೆ, ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿ, ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಅವಿಭಜಿತ ಶಿವಸೇನೆಯ (ಪ್ರಸ್ತುತ ಎರಡು ಬಣಗಳಾಗಿವೆ) ಮೂರು ದಶಕಗಳ ಮಹಾನಗರದ ಮೇಲಿನ ಪ್ರಾಬಲ್ಯ ಅಂತ್ಯಗೊಂಡಿದೆ. ಅಲ್ಲದೆ, ತಮ್ಮ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಒಂದಾದ ಉದ್ಧವ್‌ ಠಾಕ್ರೆ ಮತ್ತು ರಾಜ್‌ ಠಾಕ್ರೆ ಅವರಿಗೆ ಭಾರಿ ಹಿನ್ನಡೆಯಾಗಿದೆ.

ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣಗಳ ಮೈತ್ರಿಯೂ ಸೋಲುಂಡಿತು. ಮುಂಬೈನ ಎಲ್ಲಾ 277 ವಾರ್ಡ್ ಗಳ ಫಲಿತಾಂಶಗಳು ಮಧ್ಯರಾತ್ರಿಯ ಸುಮಾರಿಗೆ ಪ್ರಕಟವಾದವು. ಬಿಜೆಪಿ 89 ಸ್ಥಾನಗಳನ್ನು ಗೆದ್ದರೆ, ಮಿತ್ರಪಕ್ಷ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದುಕೊಂಡಿದೆ.

Advertisement

ಶಿವಸೇನೆ (ಯುಬಿಟಿ) 65 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಎಂಎನ್ಎಸ್ ಆರು ಸ್ಥಾನಗಳನ್ನು ಗೆದ್ದಿತು. ವಂಚಿತ್ ಬಹುಜನ ಅಘಾಡಿ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಕಾಂಗ್ರೆಸ್ 24 ಸ್ಥಾನಗಳನ್ನು, ಎಐಎಂಐಎಂ 8, ಎನ್ಸಿಪಿ 3, ಸಮಾಜವಾದಿ ಪಕ್ಷ 2 ಮತ್ತು ಎನ್ಸಿಪಿ (ಎಸ್ಪಿ) ಕೇವಲ ಒಂದು ಸ್ಥಾನ ಗೆದ್ದುಕೊಂಡಿತು.

ರಾಜ್ಯದ 29 ಪಾಲಿಕೆಗಳ 2,868 ಸ್ಥಾನಗಳ ಪೈಕಿ 2,833 ಸ್ಥಾನಗಳ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, ಉಳಿದ 35 ಸ್ಥಾನಗಳ ಕುರಿತು ಮಧ್ಯರಾತ್ರಿಯವರೆಗೆ ಎಸ್ಇಸಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಫಲಿತಾಂಶದಂತೆ, ಬಿಜೆಪಿ 1400 ಸ್ಥಾನಗಳನ್ನು ಗೆದ್ದರೆ, ಮಿತ್ರಪಕ್ಷ ಶಿವಸೇನೆ 397 ಸ್ಥಾನ, ಶಿವಸೇನೆ (ಯುಬಿಟಿ) 153 ಮತ್ತು ಎಂಎನ್ಎಸ್ 13 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ 324 ಸ್ಥಾನಗಳನ್ನು ಗೆದ್ದುಕೊಂಡಿತು. 227 ಸದಸ್ಯ ಬಲದ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಕ್ಕೇರಲು 114 ಸ್ಥಾನಗಳ ಅವಶ್ಯಕತೆ ಇದೆ. ಆದರೆ, ಬಿಜೆಪಿ ನೇತೃತ್ವದ ಮೈತ್ರಿಕೂಟವು 118 ಸ್ಥಾನಗಳನ್ನು ಗೆದ್ದು ಬೀಗಿದೆ.

ಮಂಬೈ ಪಾಲಿಕೆ ಭಾರತದ ಅತ್ಯಂತ ಶ್ರೀಮಂತ ಪಾಲಿಕೆಯಾಗಿದ್ದು, 2025-26ರ ಬಜೆಟ್ 74,427 ಕೋಟಿ ರೂ. ಗಾತ್ರದ್ದಾಗಿದೆ.‌ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ತವರು ಕ್ಷೇತ್ರವಾದ ಥಾಣೆಯಲ್ಲಿ, ಅವರ ಶಿವಸೇನೆ 131 ಸ್ಥಾನಗಳಲ್ಲಿ 75 ಸ್ಥಾನಗಳನ್ನು ಗೆದ್ದು ಬೀಗಿದ್ದು, ಮಿತ್ರ ಪಕ್ಷ ಬಿಜೆಪಿ 28 ಸ್ಥಾನಗಳನ್ನು ಗೆದ್ದಿತು.

ಪುಣೆ ಮತ್ತು ನೆರೆಯ ಪಿಂಪ್ರಿ-ಚಿಂಚ್ವಾಡ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದೆ. ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಎನ್ಸಿಪಿ (ಎಸ್ಪಿ) ಮೈತ್ರಿಕೂಟ ಹಿನ್ನೆಡೆ ಅನುಭವಿಸಿದೆ. 2017 ರ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ 82 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ 89 ಸ್ಥಾನಗಳನ್ನು ಗೆದ್ದುಕೊಂಡಿದೆ. 2017 ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್, ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಕಾರ್ಪೊರೇಟರ್ ಆಗಿ ಆಯ್ಕೆಯಾದರು. ಇವರು, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

151 ಸದಸ್ಯ ಬಲದ ನಾಗ್ಪುರ ನಾಗರಿಕ ಸಂಸ್ಥೆಯ ಎಲ್ಲಾ 151 ಸ್ಥಾನಗಳಲ್ಲಿ ಬಿಜೆಪಿ 102 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 34 ಸ್ಥಾನಗಳನ್ನು ಗಳಿಸಿತು. ವಂಚಿತ್ ಬಹುಜನ ಅಘಾಡಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಲಾತೂರ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಜಯಗಳಿಸಿ, 70 ಸದಸ್ಯರ ಸಂಸ್ಥೆಯಲ್ಲಿ 43 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಗಳಿಸಿತು. ಬಿಜೆಪಿ 22 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ : ಬಿಎಂಸಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮೂಲದ ಅಭ್ಯರ್ಥಿಗಳ ಗೆಲುವು

ಪುಣೆಯಲ್ಲಿ ಬಿಜೆಪಿ 96 ಸ್ಥಾನಗಳನ್ನು ಗೆದ್ದರೆ, ಎನ್ಸಿಪಿ 20 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಎನ್ಸಿಪಿ (ಎಸ್ಪಿ) ಕೇವಲ ಮೂರು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಪಿಂಪ್ರಿ ಚಿಂಚ್ವಾಡ್ನಲ್ಲಿ ಬಿಜೆಪಿ 84 ಸ್ಥಾನಗಳನ್ನು ಗೆದ್ದರೆ, ಎನ್ಸಿಪಿ 37 ಸ್ಥಾನಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದೆ. ಎನ್ಸಿಪಿ (ಎಸ್ಪಿ) ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ.‌ ಮುಂಬೈನಲ್ಲಿ, ಬಿಎಂಸಿ ಚುನಾವಣೆಯಲ್ಲಿ ಪಕ್ಷದ ನಾಯಕ ಕೆ ಅಣ್ಣಾಮಲೈ ಪ್ರಚಾರ ಮಾಡಿದ್ದ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು ತಂದುಕೊಟ್ಟಿದೆ. ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ‌ಅಣ್ಣಾಮಲೈ ಮುಂಬೈ ನಗರವು ಅಂತರರಾಷ್ಟ್ರೀಯ ನಗರವಾಗಿರುವುದರಿಂದ ಮಹಾರಾಷ್ಟ್ರಕ್ಕೆ ಮಾತ್ರ ಸೇರಿಲ್ಲ ಎಂಬ ಹೇಳಿಕೆ ನಡುವೆಯೂ ಅಣ್ಣಾಮಲೈ ಪ್ರಚಾರ ನಡೆಸಿದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಿದೆ. ಹಿಂದಿನ ಸ್ಥಾನಗಳನ್ನೂ ಕಳೆದುಕೊಂಡ ಕಾಂಗ್ರೆಸ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ಹಿಂದಿನ ಚುನಾವಣೆಯಲ್ಲಿ ಗೆದ್ದುಕೊಂಡಿದ್ದ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ.10 ರಷ್ಟು ಸೀಟುಗಳು ಕಡಿಮೆಯಾಗಿವೆ.

ಬಿಜೆಪಿ ಮರಾಠಿಯೇತರ ಹಿಂದೂ ಮತಗಳನ್ನು ಕ್ರೋಢೀಕರಿಸುವುದರೊಂದಿಗೆ ಮತ್ತು ಠಾಕ್ರೆ ಬಣಗಳು ಬಿಜೆಪಿ ವಿರೋಧಿ ಬೆಂಬಲವನ್ನು ಹಿಡಿದಿಟ್ಟುಕೊಂಡಿದ್ದರಿಂದ ಕಾಂಗ್ರೆಸ್ ಮಧ್ಯದಲ್ಲಿ ಸಿಲುಕಿಕೊಂಡಿತು. ಅನೇಕ ಭದ್ರಕೋಟೆಗಳಲ್ಲಿ, ಭಾಷಾ ಮತ್ತು ಧಾರ್ಮಿಕ ಧ್ರುವೀಕರಣ ಮತ್ತು ಪ್ರತಿ-ಧ್ರುವೀಕರಣದಿಂದಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಎರಡರ ಮುಂದೆಯೂ ನೆಲೆ ಕಳೆದುಕೊಂಡಿತು. ಕಾಂಗ್ರೆಸ್ ಪಕ್ಷದ ಸೋಲಿಗೆ ದೀರ್ಘಕಾಲದ ಆಂತರಿಕ ಜಗಳ ಮತ್ತು ಸುಸಂಬದ್ಧ ಪ್ರಚಾರ ನಿರೂಪಣೆಯ ಕೊರತೆಯೇ ಕಾರಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಅಲ್ಲದೇ, ಮುಸ್ಲಿಂ ಮತ್ತು ದಲಿತ ಮತಗಳಲ್ಲಿ ಗಮನಾರ್ಹವಾದ ವಿಘಟನೆಯಾಗಿದೆ ಎಂದು ಫಲಿತಾಂಶವು ಸೂಚಿಸುತ್ತದೆ. ಎಐಎಂಐಎಂ, ಸಮಾಜವಾದಿ ಪಕ್ಷ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷಗಳು ಕಾಂಗ್ರೆಸ್ ನ ಸಾಂಪ್ರದಾಯಿಕ ಮತಬ್ಯಾಂಕ್‌ಗಳನ್ನ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದವು.

ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷವು ರಾಜ್ಯಾದ್ಯಂತ ಮುಸ್ಲಿಂ ಪ್ರಾಬಲ್ಯದ ವಾರ್ಡ್ಗಳಲ್ಲಿ ಗಮನಾರ್ಹ ಗೆಲುವು ಸಾಧಿಸಿದೆ. ಹಲವಾರು ವರ್ಷಗಳ ನಂತರ ಚುನಾವಣೆ ನಡೆದ 29 ಪಾಲಿಕೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ 19 ಮಂದಿ ಗೆದ್ದಿದ್ದಾರೆ. ಮುಂಬೈಯಲ್ಲಿ ಉದ್ಧವ್ ರಾಜಕೀಯ ಶಕ್ತಿ ಬಿಜೆಪಿ ಈಗ ಶಿಂಧೆ ಸೇನಾ ಮತ್ತು ಅಜಿತ್ ಪವಾರ್ ನೇತೃತ್ವದ NCP ಬೆಂಬಲದೊಂದಿಗೆ BMC ಆಡಳಿತವನ್ನು ರಚಿಸಲು ಸಜ್ಜಾಗಿದೆ. ಹಾಗಿದ್ದರೂ, ಅದರ ಹಿಂದಿನ ಪ್ರಾಬಲ್ಯಕ್ಕಿಂತ ತೀವ್ರ ಕುಸಿತದ ಹೊರತಾಗಿಯೂ, ಉದ್ಧವ್ ಠಾಕ್ರೆ ಮುಂಬೈನಲ್ಲಿ ಗಮನಾರ್ಹ ರಾಜಕೀಯ ಶಕ್ತಿಯಾಗಿ ಉಳಿದಿದ್ದಾರೆ.

ಉದ್ಧವ್ ನಿರೀಕ್ಷಿಸಿದಂತೆ ಫಲಿತಾಂಶ ದೊರೆಯದಿದ್ದರೂ, ಶಿವಸೇನೆ (ಯುಬಿಟಿ) ಮರಾಠಿ ಪ್ರಾಬಲ್ಯದ ಪ್ರದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯವರನ್ನು ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಸೋಲಿಸಿದೆ. ಸೋತವರಲ್ಲಿ ಶಿವಸೇನೆ ಸಂಸದ ರವೀಂದ್ರ ವೈಕರ್ ಅವರ ಮಗಳು ಮತ್ತು ಶಿವಸೇನಾ ನಾಯಕ ಸದಾ ಸರ್ವಾಂಕರ್ ಅವರ ಮಗ ಕೂಡ ಸೇರಿದ್ದಾರೆ. ಹೆಚ್ಚಿನ ಮರಾಠಿ ಪ್ರಾಬಲ್ಯ ಪ್ರದೇಶಗಳು ಉದ್ಧವ್‌ ಬಣವನ್ನು ಬೆಂಬಲಿಸಿದೆ ಎಂಬುದನ್ನು ಈ ಫಲಿತಾಂಶವು ತೋರಿಸಿದೆ.

ಒಟ್ಟಾರೆಯಾಗಿ, ರಾಜಕೀಯ ತಂತ್ರಗಾರಿಕೆಯನ್ನು ಚಾಣಕ್ಷದಿಂದ ಹೆಣೆದ ಬಿಜೆಪಿ ಮತ್ತು ಮಿತ್ರಪಕ್ಷಗಳು ವಿವಿಧ ಪಾಲಿಕೆ ಚುನಾವಣೆಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದುಕೊಂಡರೆ, ಮತವಿಭಜನೆಗಳಿಂದ ವಿಪಕ್ಷಗಳು ಪ್ರಾಬಲ್ಯ ಕಳೆದುಕೊಂಡವು ಎಂಬುದನ್ನು ಫಲಿತಾಂಶ ತೋರಿಸುತ್ತದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು