ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ‘ಕ್ಯಾಪ್ಟಗಾನ್’ (Captagon) ಹೆಸರಿನ ಮಾದಕ ವಸ್ತುವನ್ನು ಜಪ್ತಿ ಮಾಡಿದೆ ಎಂದು ತಿಳಿಸಿದ್ದಾರೆ. 182 ಕೋಟಿ ಮೌಲ್ಯದ ಈ ಡ್ರಗ್ ಅನ್ನು “ಜಿಹಾದಿ ಡ್ರಗ್” ಎಂದು ಕರೆಯಲಾಗುತ್ತಿದ್ದು, ‘ಆಪರೇಷನ್ ರೇಜ್ಪಿಲ್’ (Operation Ragepill) ಅಡಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಈ ಸಂಬಂಧ ಒಬ್ಬ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದ್ದು, ಪಶ್ಚಿಮ ಏಷ್ಯಾಕ್ಕೆ ಸಾಗಿಸಲು ಉದ್ದೇಶಿಸಿದ್ದ ಡ್ರಗ್ ಸಾಗಾಟವನ್ನು ಅಧಿಕಾರಿಗಳು ತಡೆದಿದ್ದಾರೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.
ಎನ್ಸಿಬಿ ಅಧಿಕಾರಿಗಳು ಗುಜರಾತಿನ ಮುಂದ್ರಾ ಬಂದರು ಹಾಗೂ ದೆಹಲಿಯ ನೆಬ್ ಸರಾಯಿ (Neb Sarai) ಪ್ರದೇಶದಲ್ಲಿ ದಾಳಿ ನಡೆಸಿ ಡ್ರಗ್ ವಶಪಡಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಸಿರಿಯನ್ ಪ್ರಜೆಯೊಬ್ಬ ಈ ಮಾದಕ ವಸ್ತುಗಳನ್ನು ಟೀ ಎಲೆಗಳ ಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದನು. ಮುಂದ್ರಾ ಬಂದರಿಗೆ ಬಂದ ಕಂಟೇನರ್ನ್ನು ಉಣ್ಣೆ (Wool) ಸರಕು ಎಂದು ಘೋಷಿಸಲಾಗಿತ್ತು. ಆದರೆ ಪರಿಶೀಲನೆ ವೇಳೆ ಅದರೊಳಗೆ ಭಾರೀ ಪ್ರಮಾಣದ ಕ್ಯಾಪ್ಟಗಾನ್ ಮಾತ್ರೆಗಳು ಪತ್ತೆಯಾಗಿವೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಡ್ರಗ್ಸ್ ಬೇಟೆ: ಕಾಲೇಜು ವಿದ್ಯಾರ್ಥಿನಿ ವಶಕ್ಕೆ; ಲಕ್ಷಾಂತರ ಮೌಲ್ಯದ ಹೈಡ್ರೋವಿಡ್ ಗಾಂಜಾ ಜಪ್ತಿ!
ಸುಮಾರು 200 ಕೆಜಿ ಕ್ಯಾಪ್ಟಗಾನ್ ಸಿರಿಯಾದಿಂದ ಭಾರತಕ್ಕೆ ತರಲಾಗಿದ್ದು, ಸೌದಿ ಅರೇಬಿಯಾಗೆ ಕಳುಹಿಸಲು ಸಿದ್ಧತೆ ನಡೆದಿತ್ತು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ಅಮಿತ್ ಶಾ ಹೇಳಿದ್ದೇನು?
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅಮಿತ್ ಶಾ, “ಮೋದಿ ಸರ್ಕಾರ ‘ಡ್ರಗ್ ಫ್ರೀ ಇಂಡಿಯಾ’ ಗುರಿಗೆ ಬದ್ಧವಾಗಿದೆ. ಆಪರೇಷನ್ ರೇಜ್ಪಿಲ್ ಮೂಲಕ 182 ಕೋಟಿ ಮೌಲ್ಯದ ಕ್ಯಾಪ್ಟಗಾನ್ ಎಂಬ ‘ಜಿಹಾದಿ ಡ್ರಗ್’ ಅನ್ನು ಮೊದಲ ಬಾರಿಗೆ ಜಪ್ತಿ ಮಾಡಿರುವುದು ಮಹತ್ವದ ಸಾಧನೆ. ಪಶ್ಚಿಮ ಏಷ್ಯಾಕ್ಕೆ ಸಾಗಿಸಲು ಉದ್ದೇಶಿಸಿದ್ದ ಡ್ರಗ್ ಸಾಗಾಟ ಪತ್ತೆ ಹಾಗೂ ವಿದೇಶಿ ಪ್ರಜೆಯ ಬಂಧನ ನಮ್ಮ ಶೂನ್ಯ ಸಹಿಷ್ಣುತೆ ನೀತಿಗೆ ಸಾಕ್ಷಿಯಾಗಿದೆ. ಭಾರತದಲ್ಲಿ ಪ್ರತಿ ಗ್ರಾಂ ಡ್ರಗ್ಸ್ಗೂ ಕಡಿವಾಣ ಹಾಕಲಾಗುವುದು” ಎಂದು ಹೇಳಿದ್ದಾರೆ.
‘ಜಿಹಾದಿ ಡ್ರಗ್’ ಎಂದರೇನು?
ಕ್ಯಾಪ್ಟಗಾನ್ (Captagon) ಒಂದು ಅತ್ಯಂತ ವ್ಯಸನಕಾರಿ ಕೃತಕ ಆಂಪೆಟಮೈನ್ (Synthetic Amphetamine-type stimulant) ಮಾದಕ ವಸ್ತುವಾಗಿದೆ. ಉಗ್ರ ಸಂಘಟನೆಗಳು, ವಿಶೇಷವಾಗಿ ಐಸಿಸ್ (ISIS) ಸೇರಿದಂತೆ ಕೆಲ ಗುಂಪುಗಳು ಇದನ್ನು ಯುದ್ಧ ಸಂದರ್ಭದಲ್ಲಿ ಬಳಸಿದ್ದರಿಂದ ಈ ಡ್ರಗ್ಗೆ ‘ಜಿಹಾದಿ ಡ್ರಗ್’ ಎಂಬ ಹೆಸರು ಬಂದಿದೆ.
ಇದನ್ನು ಸೇವಿಸಿದವರಿಗೆ ದೈಹಿಕ ಶಕ್ತಿ ಹೆಚ್ಚಳವಾಗಲಿದ್ದು, ಹೆಚ್ಚು ಸಮಯ ಎಚ್ಚರದಿಂದ ಇರಲು ಸಾಮರ್ಥ್ಯ ನೀಡುತ್ತದೆ. ಭಯದ ಭಾವನೆ ಕಡಿಮೆ ಇರಲಿದ್ದು, ಉತ್ಸಾಹ ಮತ್ತು ಆಕ್ರಮಣಶೀಲತೆ ಹೆಚ್ಚಿರುತ್ತದೆ ಎಂದು ವರದಿಗಳು ತಿಳಿಸಿವೆ. ಇದನ್ನು “ಬಡವರ ಕೊಕೇನ್” (Poor Man’s Cocaine) ಎಂದೂ ಕರೆಯಲಾಗುತ್ತದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಕಾವೂರು ಪೊಲೀಸರ ಭಾರಿ ಬೇಟೆ: 1.5 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಕುಖ್ಯಾತ ಪೆಡ್ಲರ್ ‘ಇರ್ಷಾ’ ಬಂಧನ!
ಉಗ್ರ ಸಂಪರ್ಕದ ತನಿಖೆ
ಬಂಧಿತ ಸಿರಿಯನ್ ಪ್ರಜೆಯ ಉಗ್ರ ಸಂಘಟನೆಗಳ ಸಂಪರ್ಕದ ಕುರಿತೂ ತನಿಖೆ ನಡೆಯುತ್ತಿದೆ. ಆತ ದೆಹಲಿಯಲ್ಲಿ ನಿಂತುಕೊಂಡು ಪಶ್ಚಿಮ ಏಷ್ಯಾಕ್ಕೆ ಡ್ರಗ್ ಸಾಗಾಟದ ಜಾಲದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಎನ್ಸಿಬಿ ಶೀಘ್ರದಲ್ಲೇ ಪ್ರಕರಣದ ಬಗ್ಗೆ ಅಧಿಕೃತ ವಿವರ ಪ್ರಕಟಿಸುವ ಸಾಧ್ಯತೆ ಇದೆ.
11,311 ಕೋಟಿ ಮೌಲ್ಯದ ಡ್ರಗ್ ಜಪ್ತಿ
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, 2020 ರಿಂದ 2024ರವರೆಗೆ ದೇಶದ ಬಂದರುಗಳಲ್ಲಿ ನಡೆದ 19 ಪ್ರಮುಖ ಕಾರ್ಯಾಚರಣೆಗಳಲ್ಲಿ 11,311 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮಾರ್ಚ್ 18, 2025ರಂದು ಸಂಸತ್ತಿನಲ್ಲಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಈ ಮಾಹಿತಿ ನೀಡಿದ್ದರು.
ಭಾರತದಲ್ಲಿ ಸುಮಾರು 200 ಪ್ರಮುಖ ಮತ್ತು ಸಣ್ಣ ಬಂದರುಗಳಿದ್ದು, ಅವುಗಳಲ್ಲಿ ಸುಮಾರು 65 ಬಂದರುಗಳು ಸರಕು ಸಾಗಾಟದಲ್ಲಿ ತೊಡಗಿವೆ. ಪ್ರಸ್ತುತ 13 ಪ್ರಮುಖ ಬಂದರುಗಳಲ್ಲಿ CISF ಭದ್ರತೆ ಇದ್ದು, ಇನ್ನೂ 67 ಬಂದರುಗಳ ಭದ್ರತೆಯನ್ನು CISF ವಹಿಸಿಕೊಳ್ಳುವ ಸಾಧ್ಯತೆ ಇದೆ.
ಹೊಸ ‘ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ’ ಸ್ಥಾಪನೆ
ಕಳ್ಳಸಾಗಣೆ ಹಾಗೂ ಬಂದರು ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ‘ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ’ (BoPS) ಎಂಬ ಹೊಸ ಫೆಡರಲ್ ಸಂಸ್ಥೆ ರಚನೆಗೆ ಮುಂದಾಗಿದೆ. ಇದು ವಿಮಾನ ನಿಲ್ದಾಣಗಳ ಭದ್ರತೆಯನ್ನು ನೋಡಿಕೊಳ್ಳುವ BCAS ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.
ಅಂತಾರಾಷ್ಟ್ರೀಯ ಡ್ರಗ್ ಡಾನ್ ಸಲೀಂ ಡೋಲಾ ಭಾರತಕ್ಕೆ
ಎನ್ಸಿಬಿ ಇತ್ತೀಚೆಗೆ ಅಂತಾರಾಷ್ಟ್ರೀಯ ಡ್ರಗ್ ಕಿಂಗ್ಪಿನ್ ಮೊಹಮ್ಮದ್ ಸಲೀಂ ಡೋಲಾನನ್ನು ಟರ್ಕಿಯಿಂದ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. 58 ವರ್ಷದ ಸಲೀಂ ಡೋಲಾ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ (RCN) ಜಾರಿಯಾಗಿದ್ದು, ಏಪ್ರಿಲ್ 25ರಂದು ಇಸ್ತಾಂಬುಲ್ನಲ್ಲಿ ಟರ್ಕಿ ಗುಪ್ತಚರ ಸಂಸ್ಥೆ ಹಾಗೂ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು.
ಭಾರತಕ್ಕೆ ಕರೆತಂದ ಬಳಿಕ ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಎನ್ಸಿಬಿ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗಿದೆ. ಸಲೀಂ ಡೋಲಾ ವಿರುದ್ಧ ಹಲವು ಅಂತಾರಾಷ್ಟ್ರೀಯ ಡ್ರಗ್ ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿದ್ದು, ಮಧ್ಯಪ್ರಾಚ್ಯ, ಆಫ್ರಿಕಾ ಹಾಗೂ ಯುರೋಪ್ನಲ್ಲಿ ದೊಡ್ಡ ಮಟ್ಟದ ಡ್ರಗ್ ಜಾಲ ನಿರ್ಮಿಸಿದ್ದಾನೆ ಎಂಬ ಆರೋಪವಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


