ನವದೆಹಲಿ: ಸಂಕಟದ ಸಮಯದಲ್ಲಿ ಅಪ್ರತಿಮ ಧೈರ್ಯ, ಸಮಯಪ್ರಜ್ಞೆ ಮತ್ತು ಅದ್ಭುತ ಸಂಯಮ ಮೆರೆದು ಜೀವರಕ್ಷಣೆ ಮಾಡಿದ ವಿಮಾನದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೊ ಕಾಲ್ ಮೂಲಕ ಸುದೀರ್ಘವಾಗಿ ಮಾತನಾಡಿ, ಅವರ ಸಾಹಸ ಮತ್ತು ದೇಶಪ್ರೇಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಂಭಾಷಣೆಯ ವೇಳೆ ಪ್ರಧಾನಿಯವರ ಪ್ರೀತಿಯ ಮಾತುಗಳನ್ನು ಕೇಳಿ ಕ್ಯಾಪ್ಟನ್ ಸ್ಮಿತ್ ಭಾವುಕರಾದರು. ಇಡೀ ದೇಶವೇ ನಿಮಗಾಗಿ ಪ್ರಾರ್ಥಿಸುತ್ತಿದೆ ಮತ್ತು ನಿಮ್ಮ ಸಾಹಸವನ್ನು ಕಂಡು ಹೆಮ್ಮೆಪಡುತ್ತಿದೆ ಎಂದು ಪ್ರಧಾನಿ ಮೋದಿ ಧೈರ್ಯ ತುಂಬಿದರು.
“ಭಾರತೀಯರು ಪ್ರಾಣ ತೆಗೆಯುವವರಲ್ಲ, ಪ್ರಾಣ ಉಳಿಸುವವರು”: ಪ್ರಧಾನಿ ಮೋದಿ ಬಣ್ಣನೆ
ಕ್ಯಾಪ್ಟನ್ ಸ್ಮಿತ್ ಅವರ ಸಮಯಪ್ರಜ್ಞೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, “ಭಾರತೀಯರು ಎಂದರೆ ಇತರರ ಪ್ರಾಣವನ್ನು ತೆಗೆಯುವವರಲ್ಲ, ಬದಲಿಗೆ ಅಪಾಯದ ಸಮಯದಲ್ಲಿ ಪರರ ಪ್ರಾಣವನ್ನು ಉಳಿಸಲು ತಮ್ಮ ಸ್ವಂತ ಪ್ರಾಣವನ್ನೇ ಪಣಕ್ಕಿಡುವವರು ಎಂಬುದನ್ನು ನಿಮ್ಮ ಈ ಸಾಹಸ ಜಗತ್ತಿಗೆ ತೋರಿಸಿಕೊಟ್ಟಿದೆ. ಇದನ್ನು ದೇಶವು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ” ಎಂದು ಬಣ್ಣಿಸಿದರು.
ಇದನ್ನೂ ಓದಿ: ರಿಯಲ್ ಹೀರೋ ಕ್ಯಾಪ್ಟನ್ ಸ್ಮಿತ್!: ಹಾರುವ ವಿಮಾನದಲ್ಲೇ ಪೈಲಟ್ ಜೀವ ರಕ್ಷಿಸಿದ ನಾಯಕನಿಗೆ ಜಗತ್ತಿನಾದ್ಯಂತ ಸಲಾಂ
ಅಲ್ಲದೆ, ಸ್ಮಿತ್ ಅವರ ತಾಯಿ ಗೀತಾ ಬೆನ್ (Geeta Ben) ಅವರನ್ನು ಸ್ಮರಿಸಿದ ಪ್ರಧಾನಿ, “ನಿಮ್ಮ ತಾಯಿ ನಿಮಗೆ ಭಗವದ್ಗೀತೆಯ ಸನ್ಮೌಲ್ಯಗಳು ಹಾಗೂ ಪವಿತ್ರ ಬೋಧನೆಗಳನ್ನು ನೀಡಿ ಬೆಳೆಸಿದ್ದಾರೆ. ಅವರ ಸಂಸ್ಕಾರ ನಿಮ್ಮ ಈ ಕೆಚ್ಚೆದೆಯ ಕಾಯಕದಲ್ಲಿ ಎದ್ದು ಕಾಣುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಸಂಕಟ ಬಂದಾಗ ಹನುಮಾನ್ ಚಾಲೀಸಾ ಪಠಿಸಿದೆ”: ಕ್ಯಾಪ್ಟನ್ ಸ್ಮಿತ್ ಭಾವುಕ
ಪ್ರಧಾನಿ ಮೋದಿ ಅವರೊಂದಿಗಿನ ವೀಡಿಯೊ ಸಂಭಾಷಣೆ ತಮಗೆ ಅತ್ಯಂತ ವಿಶೇಷ ಮತ್ತು ಅವಿಸ್ಮರಣೀಯ ಕ್ಷಣ ಎಂದು ಕ್ಯಾಪ್ಟನ್ ಸ್ಮಿತ್ ಹೇಳಿದರು. “ಪ್ರಧಾನಿ ಮೋದಿ ಅವರೇ ನನ್ನ ಜೀವನದ ಅತಿ ದೊಡ್ಡ ಪ್ರೇರಣೆ ಮತ್ತು ಆರಾಧ್ಯ ನಾಯಕ (Idol). ದೇಶದ ಪ್ರಧಾನ ಮಂತ್ರಿಗಳೇ ಸ್ವತಃ ಕರೆ ಮಾಡಿ ಮಾತನಾಡುತ್ತಾರೆ ಎಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ. ಅವರ ಕರೆ ನನಗೆ ಅಪಾರ ಹೆಮ್ಮೆ ಮತ್ತು ಆನೆಬಲ ತಂದಿದೆ” ಎಂದು ಸ್ಮಿತ್ ಹಂಚಿಕೊಂಡರು.
ಅತ್ಯಂತ ಕಷ್ಟಕರ ಹಾಗೂ ಸವಾಲಿನ ಆ ಅಪಾಯದ ಕ್ಷಣದಲ್ಲಿ ತಾವು ಏನು ಮಾಡಿದಿರಿ ಎಂಬುದನ್ನು ಹಂಚಿಕೊಂಡ ಸ್ಮಿತ್, “ನನಗೆ ಜೀವನದಲ್ಲಿ ಯಾವುದೇ ಕಷ್ಟ ಅಥವಾ ಭೀಕರ ಪರಿಸ್ಥಿತಿ ಎದುರಾದರೂ ನಾನು ಹನುಮಾನ್ ಚಾಲೀಸಾವನ್ನು ಪಠಿಸುತ್ತೇನೆ. ಆ ಕಠಿಣ ಪರಿಸ್ಥಿತಿಯಲ್ಲೂ ನಾನು ಹನುಮಾನ್ ಚಾಲೀಸಾ ಪಠಿಸುತ್ತಲೇ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿದೆ” ಎಂದು ತಿಳಿಸಿದರು. ಕ್ಯಾಪ್ಟನ್ ಸ್ಮಿತ್ ಅವರ ಈ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

