ರಿಯಲ್ ಹೀರೋ ಕ್ಯಾಪ್ಟನ್ ಸ್ಮಿತ್!: ಹಾರುವ ವಿಮಾನದಲ್ಲೇ ಪೈಲಟ್ ಜೀವ ರಕ್ಷಿಸಿದ ನಾಯಕನಿಗೆ ಜಗತ್ತಿನಾದ್ಯಂತ ಸಲಾಂ

ಆಕಾಶದಲ್ಲಿ ಹಾರಾಡುತ್ತಿದ್ದ ವಿಮಾನದಲ್ಲಿ ತೀವ್ರ ತಾಂತ್ರಿಕ ತೊಂದರೆ ಹಾಗೂ ಕಂಪನ ಕಾಣಿಸಿಕೊಂಡಾಗ ಪ್ರಯಾಣಿಕರಲ್ಲಿ ಭೀತಿ ಆವರಿಸಿತ್ತು. ಈ ಆತಂಕದ ಕ್ಷಣದಲ್ಲಿ, ವಿಮಾನದಲ್ಲಿದ್ದ ಮುಸ್ಲಿಂ ಪೈಲಟ್ ಒಬ್ಬರ ಮೇಲೆ ರೊಚ್ಚಿಗೆದ್ದ ಪ್ರಯಾಣಿಕರು ದಾಳಿಗೆ ಮುಂದಾದಾಗ, ಸ್ವತಃ ಗಾಯಗೊಂಡಿದ್ದರೂ ಸಹಪ್ರಯಾಣಿಕರನ್ನು ತಡೆದು ಆತನ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್  ಅವರ ಸಮಯಪ್ರಜ್ಞೆ ಮತ್ತು ಮಾನವೀಯತೆ ಜಗತ್ತಿನಾದ್ಯಂತ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಡುವಿನ ಭೀಕರ ಘಟನೆಯನ್ನು ಅದೇ ವಿಮಾನದಲ್ಲಿದ್ದ ವೈದ್ಯೆ ಡಾ. ಮಾಯಾ ಪೆರೆಟ್ಜ್  ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

“ವಿಮಾನದಲ್ಲಿ ಎಲ್ಲವೂ ಸಾಮಾನ್ಯವಾಗಿಯೇ ಇತ್ತು. ನಾನು ಕೊನೆಯ ಸಾಲಿನ ಆಸನದಲ್ಲಿ ಕುಳಿತು ಪ್ರಯಾಣಿಸುತ್ತಿದ್ದೇ. ಇದ್ದಕ್ಕಿದ್ದಂತೆ ಇಡೀ ವಿಮಾನ ತೀವ್ರವಾಗಿ ಅಲುಗಾಡಲು ಪ್ರಾರಂಭಿಸಿತು. ಪ್ರಯಾಣಿಕರಲ್ಲಿ ದೊಡ್ಡ ಮಟ್ಟದ ಆತಂಕ ಸೃಷ್ಟಿಯಾಯಿತು. ಸ್ವಲ್ಪ ಸಮಯದ ನಂತರ ಕಾಕ್‌ಪಿಟ್ ಬಾಗಿಲು ತೆರೆಯಲ್ಪಟ್ಟಿತು. ಆತಂಕದಲ್ಲಿದ್ದ ಕೆಲ ಪ್ರಯಾಣಿಕರು ವಿಮಾನದಲ್ಲಿದ್ದ ಮುಸ್ಲಿಂ ಪೈಲಟ್ ಮೇಲೆ ಏಕಾಏಕಿ ದಾಳಿ ಮಾಡಲು ಆರಂಭಿಸಿದರು. ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಯಿತೆಂದರೆ, ರೊಚ್ಚಿಗೆದ್ದ ಕೆಲವರು ಆ ಪೈಲಟ್‌ನನ್ನು ಹಾರಾಡುತ್ತಿದ್ದ ವಿಮಾನದಿಂದಲೇ ಹೊರಗೆ ತಳ್ಳಲು  ಸಿದ್ಧರಾಗಿದ್ದರು” ಎಂದು ಭೀಕರ ವಾತಾವರಣವನ್ನು ಡಾ. ಮಾಯಾ ಬಿಚ್ಚಿಟ್ಟಿದ್ದಾರೆ.

ರೊಚ್ಚಿಗೆದ್ದ ಜನಸಮೂಹ ಪೈಲಟ್ ಮೇಲೆ ದಾಳಿ ನಡೆಸುತ್ತಿದ್ದಾಗ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಧೈರ್ಯವಾಗಿ ಮುಂದೆ ಬಂದು ತಡೆದು ನಿಂತರು. ಈ ವೇಳೆ ಕ್ಯಾಪ್ಟನ್ ಸ್ಮಿತ್, “ಆತನನ್ನು ಬಿಟ್ಟುಬಿಡಿ! ನಿಮ್ಮಲ್ಲಿ ಯಾರಾದರೂ ವಿಮಾನವನ್ನು ನಿಯಂತ್ರಿಸಲು (Control) ಸಾಧ್ಯವಿದ್ದರೆ ಮುಂದೆ ಬಂದು ನೋಡಿ!” ಎಂದು ಗಂಭೀರವಾಗಿ ಎಚ್ಚರಿಸಿದರು.

ಸ್ಮಿತ್ ಅವರ ಈ ಮಾತು ಪ್ರಯಾಣಿಕರನ್ನು ಕ್ಷಣಕಾಲ ಶಾಂತಗೊಳಿಸಿತು. ಸ್ಮಿತ್ ಹಾಗೂ ವಿಮಾನದಲ್ಲಿದ್ದ ಕೆಲವು ವೈದ್ಯರು ಸೇರಿ ಜನರನ್ನು ಸಮಾಧಾನಪಡಿಸಿ, ಪೈಲಟ್‌ನನ್ನು ವಿಮಾನದಿಂದ ಹೊರಹಾಕದಂತೆ ತಡೆದರು. “ತಪ್ಪಿತಸ್ಥನ ವಿರುದ್ಧ ಕಾನೂನುಬದ್ಧವಾಗಿ ಅಧಿಕಾರಿಗಳೇ ಕ್ರಮ ಕೈಗೊಳ್ಳಲಿ” ಎಂದು ತಿಳಿಹೇಳಿ ದೊಡ್ಡ ದುರಂತವನ್ನು ತಪ್ಪಿಸಿದರು.

ಇದನ್ನೂ ಓದಿ: 9/11 ಮಾದರಿಯ ಭೀಕರ ವಿಮಾನ ಪತನ ಸಂಚು ವಿಫಲ!: 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸ

“ನನ್ನ ಮಗಳು ಸ್ಮಿತ್‌ನಂತಾಗಲಿ” – ವೈದ್ಯೆಯ ಭಾವುಕ ನುಡಿ:

ಘಟನೆಯ ನಂತರ ಮಾತನಾಡಿದ ಡಾ. ಮಾಯಾ, “ಕ್ಯಾಪ್ಟನ್ ಸ್ಮಿತ್ ನಿಜಕ್ಕೂ ಅತ್ಯಂತ ಧೈರ್ಯಶಾಲಿ ಮತ್ತು ಉನ್ನತ ಮಾನವೀಯತೆ ಉಳ್ಳ ವ್ಯಕ್ತಿ. ನನ್ನ ಮಗಳು ಬೆಳೆದು ದೊಡ್ಡವಳಾದ ಮೇಲೆ ಸ್ಮಿತ್ ಅವರಂತಹ ಶ್ರೇಷ್ಠ ಮಾನವೀಯ ಗುಣವುಳ್ಳ ವ್ಯಕ್ತಿಯಾಗಬೇಕೆಂದು ನಾನು ಬಯಸುತ್ತೇನೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಅವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

ನಾವು ಯಾವುದೇ ದೇಶ ಅಥವಾ ಧರ್ಮಕ್ಕೆ ಸೇರಿದವರಾಗಿದ್ದರೂ, ಬಿಕ್ಕಟ್ಟಿನ ಸಮಯದಲ್ಲಿ ಧೈರ್ಯ ಹಾಗೂ ಮಾನವೀಯತೆ ಮೆರೆದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಂತಹ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಜಗತ್ತಿನಾದ್ಯಂತ ಜನರು ಕೊಂಡಾಡುತ್ತಿದ್ದಾರೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *