ಕರಾವಳಿಗೆ ₹11,000 ಕೋಟಿ ಯೋಜನೆ, ಎಐ–ಸ್ಪೇಸ್ ಟೆಕ್ ಹಬ್ ಗುರಿ; ಸೌಜನ್ಯ ಪ್ರಕರಣದಲ್ಲಿ ವೈಜ್ಞಾನಿಕ ತನಿಖೆ ಬಗ್ಗೆ ಗೃಹಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದೇನು?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಚೈತನ್ಯಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಮಂಗಳೂರನ್ನು ಜಾಗತಿಕ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬುಧವಾರ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದ ಕೈಗಾರಿಕಾ ಅಭಿವೃದ್ಧಿ, ಮೀನುಗಾರರ ಸಮಸ್ಯೆ ಹಾಗೂ ಬಹುಚರ್ಚಿತ ಸೌಜನ್ಯ ಪ್ರಕರಣದ ತನಿಖೆಯ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡರು.

ಮಂಗಳೂರಿನಲ್ಲಿ ಜಾಗತಿಕ ಕಂಪನಿಗಳ ಕಾರ್ಯಾಚರಣೆ; ₹11 ಸಾವಿರ ಕೋಟಿ ಯೋಜನೆ:

Advertisement

“ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ‘ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮದಡಿ ಗ್ಲೋಬಲ್ ಕೆಪಬಿಲಿಟಿ ಸೆಂಟರ್ (GCC) ಉದ್ಘಾಟನೆಗೆ ಬಂದಾಗ ಕೈಗೊಂಡ ಕ್ರಮಗಳಿಗೆ ಉತ್ತಮ ಫಲಿತಾಂಶ ಸಿಗುತ್ತಿದೆ. ಡೆನ್ಮಾರ್ಕ್ ಮೂಲದ ಸಂಸ್ಥೆಗಳು ಸೇರಿದಂತೆ ಹಲವು ಕಂಪನಿಗಳು ಮಂಗಳೂರಿಗೆ ಬಂದಿವೆ. ಪ್ರತಿಷ್ಠಿತ ಡೆಲಾಯ್ಟ್ (Deloitte) ಕಂಪನಿ ಮಂಗಳೂರಿನಲ್ಲಿ ಕಾರ್ಯಾರಂಭ ಮಾಡಿದ್ದು, ಈಗಾಗಲೇ 700 ಮಂದಿಗೆ ಉದ್ಯೋಗ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 1,000ಕ್ಕೆ ತಲುಪುವ ಸಾಧ್ಯತೆಯಿದೆ” ಎಂದು ಸಚಿವರು ತಿಳಿಸಿದರು.

ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್ ಮತ್ತು ಸ್ಪೇಸ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಮಂಗಳೂರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿಯಿದೆ. ಮಂಗಳೂರಿನಲ್ಲೇ ಸಚಿವ ಸಂಪುಟ ಸಭೆ ನಡೆಸಿ ಸುಮಾರು ₹11 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ. ಐಟಿ ಪಾರ್ಕ್, ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಜೊತೆಗೆ ಕರಾವಳಿ ಅಭಿವೃದ್ಧಿಗೆ ಮೆರೈನ್ ಬಯೋಟೆಕ್ ಪಾಲಿಸಿ ಜಾರಿಗೆ ತರಲಾಗುವುದು ಹಾಗೂ 12 ನಾಟಿಕಲ್ ಮೈಲುಗಳ ಕರಾವಳಿ ವ್ಯಾಪ್ತಿಯ ಸಂಪನ್ಮೂಲ ಬಳಸಿಕೊಂಡು ಹೊಸ ಉದ್ಯಮಗಳಿಗೆ ಉತ್ತೇಜನ ನೀಡಲಾಗುವುದು ಎಂದು ವಿವರಿಸಿದರು.

Advertisement

ವೈಜ್ಞಾನಿಕ ದಾಖಲೆಗಳ ಆಧಾರದಲ್ಲೇ ತನಿಖೆ; ಯೂಟ್ಯೂಬ್ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ:

ಸೌಜನ್ಯ ಪ್ರಕರಣದ ಮರುತನಿಖೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಸೌಜನ್ಯ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದೆ. ಸಾರ್ವಜನಿಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಪ್ರಕರಣ ನಡೆದು ಸುಮಾರು 14 ವರ್ಷಗಳಾಗಿವೆ. ಯಾರಿಗೂ ಅನ್ಯಾಯವಾಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಸತ್ಯ ತಿಳಿಯಲು ವೈಜ್ಞಾನಿಕ ದಾಖಲೆಗಳ ಆಧಾರದ ಮೇಲೆಯೇ ಕ್ರಮ ಕೈಗೊಳ್ಳಬೇಕಿದೆ. ಹಲವರು ನನಗೆ ಪತ್ರ ಬರೆದು ಕೆಲವು ಅಂಶಗಳನ್ನು ತಿಳಿಸಿದ್ದು, ಅದನ್ನು ತನಿಖೆಗೆ ನೀಡಲಾಗಿದೆ” ಎಂದರು.

Advertisement

“ಇಂದು ಕೆಲವು ಯೂಟ್ಯೂಬ್ ಚಾನೆಲ್‌ಗಳೇ ಪ್ರಕರಣದ ಎಲ್ಲಾ ತೀರ್ಮಾನಗಳನ್ನು ಮಾಡುತ್ತಿರುವಂತಿದೆ. ಅವರಿಗೆ ಮಾಹಿತಿ ಎಲ್ಲಿಂದ ಬರುತ್ತದೆ ಎಂಬುದು ಗೊತ್ತಿಲ್ಲ. ಕೆಲವು ಯೂಟ್ಯೂಬ್ ಚಾನೆಲ್‌ಗಳು ಮಿರ್ಚಿ ಮಸಾಲೆ ಸೇರಿಸಿ ಸುದ್ದಿ ಪ್ರಸಾರ ಮಾಡುತ್ತಿವೆ. ಯೂಟ್ಯೂಬ್‌ನಲ್ಲಿ ಅಧಿಕೃತ ಹಾಗೂ ಹಿರಿಯ ಪ್ರಭುದ್ಧ ಪತ್ರಕರ್ತರು ಬಹಳ ಕಡಿಮೆ ಇದ್ದಾರೆ. ಸುಳ್ಳು ಸುದ್ದಿ ಹಾಗೂ ನ್ಯಾರೆಟಿವ್‌ಗಳಿಗೆ ಸಾರ್ವಜನಿಕರು ಕಿವಿಗೊಡಬಾರದು” ಎಂದು ಮನವಿ ಮಾಡಿದರು.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಹಾವು-ಏಣಿ ಆಟ: ಬೆಂಗಳೂರು, ಮಂಗಳೂರು, ಉಡುಪಿ, ಚಿಕ್ಕಮಗಳೂರು ಭಾಗಗಳಲ್ಲಿ ಇಂದಿನ ಬಂಗಾರದ ದರ ಎಷ್ಟಿದೆ?

ಮೀನುಗಾರರ ಮೇಲೆ ನೆರೆ ರಾಜ್ಯಗಳಿಂದ ಶೋಷಣೆ ಆರೋಪ: ಕೇರಳ, ಗೋವಾ ವಿರುದ್ಧ ಪರಿಶೀಲನೆಗೆ ಸಿದ್ಧ:

ಕರ್ನಾಟಕದ ಮೀನುಗಾರರ ಮೇಲೆ ನೆರೆಯ ರಾಜ್ಯಗಳಿಂದ ಶೋಷಣೆಯಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಸಚಿವರು, “ಬೇರೆಯವರ ಸಂಪನ್ಮೂಲಗಳನ್ನು ಯಾರೂ ಬಳಸಿಕೊಳ್ಳುವ ಹಕ್ಕಿಲ್ಲ. 12 ನಾಟಿಕಲ್ ಮೈಲುಗಳ ಸಮುದ್ರ ವ್ಯಾಪ್ತಿ ನಮ್ಮ ನಿಗಾದಲ್ಲಿದೆ. ನೆರೆಯ ಕೇರಳ ಮತ್ತು ಗೋವಾ ಸರ್ಕಾರಗಳಿಂದ ನಮ್ಮ ಮೀನುಗಾರರಿಗೆ ಶೋಷಣೆಯಾಗುತ್ತಿದ್ದರೆ ಆ ಬಗ್ಗೆ ಪರಿಶೀಲನೆ ನಡೆಸಲು ನಮ್ಮ ಸರ್ಕಾರ ಸಿದ್ಧವಿದೆ” ಎಂದು ಭರವಸೆ ನೀಡಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ