ಮೂಲಸೌಕರ್ಯ ಉಪಕರಣಗಳ ತಯಾರಿಕೆಗೆ ಕೇಂದ್ರ ಸಂಪುಟದ 11,000 ಕೋಟಿ ರೂ. ಯೋಜನೆ: ಚೀನಾ ರಫ್ತು ನಿರ್ಬಂಧದ ನಡುವೆ ಟನಲ್ ಬೋರಿಂಗ್ ಯಂತ್ರಗಳ ದೇಶೀಯ ಉತ್ಪಾದನೆಗೆ ಒತ್ತು

ದೆಹಲಿ: ದೇಶದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣ (Construction and Infrastructure Equipment – CIE) ತಯಾರಿಕಾ ವ್ಯವಸ್ಥೆಗೆ ಬಲ ತುಂಬಲು ಕೇಂದ್ರ ಸಚಿವ ಸಂಪುಟ ಬುಧವಾರ (ನವೆಂಬರ್ 25) ₹11,000 ಕೋಟಿ ವೆಚ್ಚದ ಮಹತ್ವದ ಯೋಜನೆಗೆ ಅನುಮೋದನೆ ನೀಡಿದೆ. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಪ್ರಸಕ್ತ ಹಣಕಾಸು ವರ್ಷದಿಂದ (FY2026-27) ಈ ಯೋಜನೆಯು ಎಂಟು ವರ್ಷಗಳ ಕಾಲ ಜಾರಿಯಲ್ಲಿರಲಿದ್ದು, ಅತ್ಯಾಧುನಿಕ CIE ವಲಯದಲ್ಲಿ ಸ್ವದೇಶಿ ಸಾಮರ್ಥ್ಯ ನಿರ್ಮಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತವನ್ನು ಪ್ರಮುಖ ಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ಶೇ. 45ರಷ್ಟು ಆಮದು ಅವಲಂಬನೆ; FY2029-30ರ ವೇಳೆಗೆ ₹2,28,100 ಕೋಟಿ ಮಾರುಕಟ್ಟೆ ನಿರೀಕ್ಷೆ:

Advertisement

ಭಾರತದ CIE ಉದ್ಯಮವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, FY2024-25ರಲ್ಲಿ ₹97,000 ಕೋಟಿ ಗಾತ್ರ ಹೊಂದಿತ್ತು. ಆದರೂ ಸುಮಾರು ಶೇ. 45ರಷ್ಟು ಬೇಡಿಕೆ ಆಮದಿನ ಮೇಲೆಯೇ ಅವಲಂಬಿತವಾಗಿದೆ ಎಂದು ಸಚಿವರು ಹೇಳಿದರು. ರಸ್ತೆ, ಬಂದರು ಸೇರಿದಂತೆ ಮೂಲಸೌಕರ್ಯ ಹಾಗೂ ವಸತಿ ವಲಯದ ವೇಗದ ಬೆಳವಣಿಗೆಯಿಂದಾಗಿ FY2029-30ರ ವೇಳೆಗೆ ಈ ಮಾರುಕಟ್ಟೆ ದ್ವಿಗುಣಕ್ಕಿಂತಲೂ ಹೆಚ್ಚಾಗಿ ಸುಮಾರು ₹2,28,100 ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

8 ವರ್ಷಗಳ ಅನುಷ್ಠಾನ ವೇಳಾಪಟ್ಟಿ; 7 ಪ್ರಮುಖ ಯಂತ್ರೋಪಕರಣಗಳ ಮೇಲೆ ಗಮನ:

Advertisement

ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಎರಡು ವರ್ಷಗಳ ಆರಂಭಿಕ ಅವಧಿ (FY2026-27 ರಿಂದ FY2027-28) ಇರಲಿದ್ದು, ನಂತರ ಐದು ವರ್ಷಗಳ ಪ್ರೋತ್ಸಾಹಧನ ವಿತರಣಾ ಅವಧಿ (FY2028-29 ರಿಂದ FY2032-33) ಇರಲಿದೆ. ಅಂತಿಮ ಎಂಟನೇ ವರ್ಷದಲ್ಲಿ (FY2033-34) FY2032-33ರ ಹೆಚ್ಚುವರಿ ಮಾರಾಟದ ಪ್ರೋತ್ಸಾಹಧನ ಇತ್ಯರ್ಥಪಡಿಸಲಾಗುತ್ತದೆ. ಸಂಪೂರ್ಣವಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿರುವ ಟನಲ್ ಬೋರಿಂಗ್ ಯಂತ್ರಗಳು (Tunnel Boring Machines), ಆಫ್-ಹೈವೇ ಟ್ರಕ್‌ಗಳು, ಎಕ್ಸ್‌ಕವೇಟರ್‌ಗಳು, ಕ್ರೇನ್‌ಗಳು, ಲೋಡರ್‌ಗಳು, ಪೈಲಿಂಗ್ ರಿಗ್‌ಗಳು ಮತ್ತು ಡ್ರಿಲ್ಲಿಂಗ್ ಯಂತ್ರಗಳು ಸೇರಿದಂತೆ ಏಳು ವಿಭಾಗಗಳ ಉಪಕರಣಗಳನ್ನು ಈ ಯೋಜನೆ ಒಳಗೊಂಡಿದೆ. ಜೊತೆಗೆ ದೇಶದಲ್ಲೇ ಅತ್ಯಾಧುನಿಕ ಸಮರ್ಪಿತ CIE ಪರೀಕ್ಷಾ ಕೇಂದ್ರವನ್ನೂ ಸ್ಥಾಪಿಸಲಾಗುವುದು.

ಇದನ್ನೂ ಓದಿ:ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪವಾಡ: ರೋಬೋಟಿಕ್ ತಂತ್ರಜ್ಞಾನದಿಂದ ಜಟಿಲ ‘ವಿಪ್ಪಲ್ಸ್’ ಶಸ್ತ್ರಚಿಕಿತ್ಸೆ ಯಶಸ್ವಿ

Advertisement

ಚೀನಾ ರಫ್ತು ನಿರ್ಬಂಧದ ಬೆನ್ನಲ್ಲೇ ಮಹತ್ವದ ಹೆಜ್ಜೆ:

ಕಳೆದ ತಿಂಗಳು ಚೀನಾ ಟನಲ್ ಬೋರಿಂಗ್ ಯಂತ್ರಗಳು ಸೇರಿದಂತೆ ಪ್ರಮುಖ ಯಂತ್ರೋಪಕರಣಗಳ ಮೇಲೆ ಹೊಸ ರಫ್ತು ನಿರ್ಬಂಧಗಳನ್ನು ಘೋಷಿಸಿತ್ತು. ಇದು ಭಾರತದ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ದೇಶೀಯ ತಯಾರಿಕೆಗೆ ಉತ್ತೇಜನ ನೀಡುವ ಈ ಯೋಜನೆ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ