Breaking News

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪವಾಡ: ರೋಬೋಟಿಕ್ ತಂತ್ರಜ್ಞಾನದಿಂದ ಜಟಿಲ ‘ವಿಪ್ಪಲ್ಸ್’ ಶಸ್ತ್ರಚಿಕಿತ್ಸೆ ಯಶಸ್ವಿ

ಮಣಿಪಾಲ: ಶಸ್ತ್ರಚಿಕಿತ್ಸಾ ಲೋಕದಲ್ಲೇ ಅತ್ಯಂತ ಜಟಿಲ ಹಾಗೂ ಸವಾಲಿನದ್ದೆಂದು ಪರಿಗಣಿಸಲ್ಪಟ್ಟಿರುವ ‘ವಿಪ್ಪಲ್ಸ್ ಪ್ರೊಸೀಜರ್’ (Whipple’s procedure) ಶಸ್ತ್ರಚಿಕಿತ್ಸೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನೆರವೇರಿಸಿದ್ದಾರೆ. ೫೮ ವರ್ಷದ ಮಹಿಳೆಯೊಬ್ಬರ ಮೇದೋಜೀರಕ ಗ್ರಂಥಿ (Pancreas) ಕ್ಯಾನ್ಸರ್ ಅನ್ನು ಕೀಹೋಲ್ ಹಾಗೂ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿ ತೆಗೆದುಹಾಕಲಾಗಿದ್ದು, ರೋಗಿಯು ಕೇವಲ ೭ ದಿನಗಳಲ್ಲಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗಿದ ಕಾರಣ (Obstructive Jaundice) ಆಸ್ಪತ್ರೆಗೆ ಬಂದಿದ್ದ ಮಹಿಳೆಯನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಿದಾಗ ಪಿತ್ತನಾಳ ಹಾಗೂ ಮೇದೋಜೀರಕ ಗ್ರಂಥಿಯ ಭಾಗದಲ್ಲಿ ಗೆಡ್ಡೆ (Periampullary tumour) ಇರುವುದು ಪತ್ತೆಯಾಗಿತ್ತು. ರೋಗಿಯ ಯಕೃತ್ತಿಗೆ (Liver) ರಕ್ತ ಪೂರೈಸುವ ಅಪಧಮನಿಯು (Artery) ಅಪರೂಪದ ವಿನ್ಯಾಸದಲ್ಲಿದ್ದು, ಗೆಡ್ಡೆಯ ತೀರ ಹತ್ತಿರದಲ್ಲೇ ಹಾದುಹೋಗಿತ್ತು. ಇದರಿಂದ ಶಸ್ತ್ರಚಿಕಿತ್ಸೆ ವೇಳೆ ರಕ್ತಸ್ರಾವವಾಗುವ ಭಾರಿ ಅಪಾಯವಿತ್ತು. ಮೇದೋಜೀರಕ ಗ್ರಂಥಿಯ ಹೆಡ್, ಸಣ್ಣ ಕರುಳಿನ ಭಾಗ, ಪಿತ್ತನಾಳ ಹಾಗೂ ಪಿತ್ತಕೋಶವನ್ನು ತೆಗೆದುಹಾಕಿ, ಜೀರ್ಣಾಂಗವ್ಯೂಹವನ್ನು ಮರುಜೋಡಣೆ ಮಾಡುವ ಅತ್ಯಂತ ಸಂಕೀರ್ಣ ಪ್ರಕ್ರಿಯೆಯನ್ನು ವೈದ್ಯರು ಕೈಗೊಂಡರು.

ದೊಡ್ಡದಾಗಿ ಹೊಟ್ಟೆ ಸೀಳಿ ಮಾಡುವ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯ ಬದಲಿಗೆ, ವೈದ್ಯರು ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು ಆಯ್ಕೆ ಮಾಡಿಕೊಂಡರು. ಸಣ್ಣ ಕೀಹೋಲ್ ರಂಧ್ರಗಳ ಮೂಲಕ ಕ್ಯಾನ್ಸರ್ ಗೆಡ್ಡೆಯನ್ನು ತೆಗೆದುಹಾಕಿ, ‘Hugo RAS Robotic System’ ಬಳಸಿ ಅತ್ಯಂತ ನಿಖರವಾಗಿ ಜೀರ್ಣಾಂಗವ್ಯೂಹವನ್ನು ಮರುಜೋಡಿಸಲಾಯಿತು. ಸುಮಾರು ೮ ಗಂಟೆಗಳ ಕಾಲ ನಡೆದ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ಕೇವಲ ೨೦೦ ಮಿ.ಲೀ ರಕ್ತಸ್ರಾವವಾಗಿದ್ದು, ಯಾವುದೇ ತೆರೆದ ಶಸ್ತ್ರಚಿಕಿತ್ಸೆಯ (Open surgery) ಅಗತ್ಯವಿಲ್ಲದೇ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಆಂಕೊಲಾಜಿ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ನವೀನ್ ಕುಮಾರ್ ಎನ್ ಅವರ ನೇತೃತ್ವದಲ್ಲಿ ಡಾ. ನವಾಜ್ ಉಸ್ಮಾನ್, ಡಾ. ಪ್ರೀತಿ ಎಸ್ ಶೆಟ್ಟಿ, ಡಾ. ಅಖಿಲ್ ಪಾಲೋಡ್, ಡಾ. ಅನಂತಕೃಷ್ಣನ್ ಬಾಲಕೃಷ್ಣನ್ ಹಾಗೂ ಅರಿವಳಿಕೆ ವಿಭಾಗದ ವೈದ್ಯರ ತಂಡ ಈ ಸಾಹಸವನ್ನು ನಿರ್ವಹಿಸಿದೆ.

ಇದನ್ನೂ ಓದಿ: ಉಡುಪಿಯಲ್ಲಿ ದಾರುಣ ಘಟನೆ: ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಮಗ

“ರಕ್ತನಾಳಗಳು ಅಪರೂಪದ ಮಾರ್ಗದಲ್ಲಿದ್ದಾಗ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಸವಾಲಿನ ಕೆಲಸ. ಕೀಹೋಲ್ ಹಾಗೂ ರೋಬೋಟಿಕ್ ತಂತ್ರಜ್ಞಾನದ ಸಮ್ಮಿಶ್ರಣದಿಂದಾಗಿ ಕನಿಷ್ಠ ನೋವಿನಲ್ಲಿ, ರೋಗಿಗೆ ಯಾವುದೇ ತೊಂದರೆಯಾಗದಂತೆ ನಿಖರವಾಗಿ ಕಾರ್ಯಾಚರಣೆ ಮುಗಿಸಲು ಸಾಧ್ಯವಾಯಿತು.” ಎಂದು ಶಸ್ತ್ರಚಿಕಿತ್ಸಾ ಆಂಕೊಲಾಜಿ ವಿಭಾಗದ ಡಾ. ನವೀನ್ ಕುಮಾರ್ ಎನ್, ಮುಖ್ಯಸ್ಥರು

“ದೊಡ್ಡ ಮೆಟ್ರೋ ನಗರಗಳಿಗೆ ತೆರಳುವ ಅಗತ್ಯವಿಲ್ಲದೇ ಕರಾವಳಿ ಕರ್ನಾಟಕದ ಜನರಿಗೆ ವಿಶ್ವ ದರ್ಜೆಯ ರೋಬೋಟಿಕ್ ಕ್ಯಾನ್ಸರ್ ಚಿಕಿತ್ಸೆಯನ್ನು ಮಣಿಪಾಲದಲ್ಲೇ ಒದಗಿಸುತ್ತಿರುವುದು ಹೆಮ್ಮೆಯ ವಿಚಾರ.” ಎಂದು ಮಾಹೆ ಬೋಧನಾ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಾಂಟಿಪುಡಿ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *