ಭೋಪಾಲ್: ಆಸ್ಪತ್ರೆಯ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ ತಾಯಿಯ ನಂಬಿಕೆ ದುರುಪಯೋಗಪಡಿಸಿಕೊಂಡು, ಒಂದೂವರೆ ವರ್ಷದ ಕಂದಮ್ಮನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ೨೦ ವರ್ಷದ ಯುವಕನನ್ನು ಮಧ್ಯಪ್ರದೇಶದ ಭೋಪಾಲ್ ಪೊಲೀಸರು ಬಂಧಿಸಿದ್ದಾರೆ.
ಛತ್ತರ್ಪುರ ಮೂಲದ ಕೂಲಿ ಕಾರ್ಮಿಕನಾಗಿದ್ದ ಆರೋಪಿಯು ಮಗುವಿನ ಕುಟುಂಬಕ್ಕೆ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ತಾಯಿ ಆಸ್ಪತ್ರೆಯ ಕ್ಯಾಂಟೀನ್ನಲ್ಲಿ ಉದ್ಯೋಗಿಯಾಗಿದ್ದು, ಆರೋಪಿ ಆಗಾಗ್ಗೆ ಅಲ್ಲಿಗೆ ಬರುತ್ತಿದ್ದರಿಂದ ಕುಟುಂಬಕ್ಕೆ ನಿಕಟ ಪರಿಚಯವಿದ್ದ. ಆತ ಆಗಾಗ ಮಗುವಿನೊಂದಿಗೆ ಆಟವಾಡುತ್ತಿದ್ದ ಕಾರಣ ಆತನ ಮೇಲೆ ತಾಯಿಗೆ ಯಾವುದೇ ಅನುಮಾನವಿರಲಿಲ್ಲ.
ಭಾನುವಾರ ಸಂಜೆ ಸುಮಾರು 6.20 ರ ಸುಮಾರಿಗೆ ಕ್ಯಾಂಟೀನ್ನಲ್ಲಿ ತಾಯಿ ಕೆಲಸದಲ್ಲಿ ನಿರತರಾಗಿದ್ದಾಗ, ಮಗುವನ್ನು ಕೇವಲ 15 ನಿಮಿಷಗಳ ಕಾಲ ನೋಡಿಕೊಳ್ಳುವಂತೆ ಆರೋಪಿಗೆ ವಹಿಸಿ ತೆರಳಿದ್ದರು. ಆದರೆ ವಾಪಸ್ ಬಂದು ನೋಡಿದಾಗ ಮಗು ಹಾಗೂ ಆರೋಪಿ ಇಬ್ಬರೂ ಕಾಣೆಯಾಗಿದ್ದರು.
ಮಗು ಕಾಣೆಯಾಗಿದ್ದರಿಂದ ಗಾಬರಿಗೊಂಡ ತಾಯಿ ಹಾಗೂ ಸಂಬಂಧಿಕರು ಆಸ್ಪತ್ರೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಕುರಿಗಾಹಿಯೊಬ್ಬರು, ಆರೋಪಿಯು ಮಗುವನ್ನು ಆಸ್ಪತ್ರೆಯ ಹಿಂಭಾಗದಲ್ಲಿದ್ದ ಹಾಳುಬಿದ್ದ ಕಟ್ಟಡದತ್ತ ಕರೆದೊಯ್ಯುತ್ತಿರುವುದನ್ನು ನೋಡಿದ್ದಾಗಿ ತಿಳಿಸಿದ್ದಾರೆ. ತಕ್ಷಣವೇ ಆ ಸ್ಥಳಕ್ಕೆ ಧಾವಿಸಿದ ತಾಯಿ ಹಾಗೂ ಕುಟುಂಬಸ್ಥರಿಗೆ ಆರೋಪಿಯು ಮಗುವಿನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ತಾಯಿ ತಕ್ಷಣವೇ ಮಗುವನ್ನು ರಕ್ಷಿಸಿ, ಸ್ಥಳೀಯರ ನೆರವಿನಿಂದ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಎವರೆಸ್ಟ್, ಲಾಲ್ಜಿ ಗೋಧೂ ಹಿಂಗುಗಳ ಮಾರಾಟಕ್ಕೆ FSSAI ತಾತ್ಕಾಲಿಕ ನಿಷೇಧ
ಘಟನೆ ಸಂಬಂಧ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹಾಗೂ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಗುವನ್ನು ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಮಗುವಿಗೆ ಯಾವುದೇ ಗಂಭೀರ ದೈಹಿಕ ಗಾಯಗಳಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

