Breaking News

‘ಓಲ್ಡ್ ಮಾಂಕ್’ ರಮ್ ಪ್ರಿಯರಿಗೆ ಶಾಕ್: ಬಾಟಲಿ ಮೇಲಿನ ‘7 ಇಯರ್ಸ್ ಓಲ್ಡ್’ ಲೇಬಲ್ ತೆಗೆದುಹಾಕಲು ಕಂಪನಿ ಸಮ್ಮತಿ

ಮುಂಬೈ: ದೇಶದ ಅತ್ಯಂತ ಜನಪ್ರಿಯ ಮದ್ಯದ ಬ್ರ್ಯಾಂಡ್‌ಗಳಲ್ಲಿ ಒಂದಾದ ‘ಓಲ್ಡ್ ಮಾಂಕ್’ (Old Monk) ರಮ್ ಬಾಟಲಿಯ ಪ್ರಸಿದ್ಧ ಲೇಬಲ್ ಶೀಘ್ರದಲ್ಲೇ ಬದಲಾಗಲಿದೆ. ಬಾಟಲಿಯ ಮೇಲಿರುವ “7 years old blended” (೭ ವರ್ಷ ಹಳೆಯದ್ದು) ಎಂಬ ಪ್ರತಿಪಾದನೆಯನ್ನು ಪ್ಯಾಕೇಜಿಂಗ್‌ನಿಂದ ತೆಗೆದುಹಾಕಲು ಅದರ ತಯಾರಿಕಾ ಸಂಸ್ಥೆಯಾದ ‘ಮೋಹನ್ ಮೀಕಿನ್’ (Mohan Meakin) ಬಾಂಬೆ ಹೈಕೋರ್ಟ್‌ಗೆ ಮುಚ್ಚಳಿಕೆ (Undertaking) ನೀಡಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎತ್ತಿದ್ದ ಆಕ್ಷೇಪಣೆ ಹಾಗೂ ಬಾಂಬೆ ಹೈಕೋರ್ಟ್ ವ್ಯಕ್ತಪಡಿಸಿದ ತೀವ್ರ ಅಸಮಾಧಾನದ ಬೆನ್ನಲ್ಲೇ ಕಂಪನಿಯು ಈ ನಿರ್ಧಾರ ಕೈಗೊಂಡಿದೆ. ಓಲ್ಡ್ ಮಾಂಕ್ ರಮ್‌ನಲ್ಲಿ ೭ ವರ್ಷ ಹಳೆಯದಾದ ಮಾಗಿದ (Matured) ರಮ್ ಶೇಕಡಾ ೫ ಕ್ಕಿಂತಲೂ ಕಡಿಮೆಯಿದ್ದು, ಉಳಿದ ಭಾಗವು ಮಾಗಿಸದ ತಟಸ್ಥ ಮದ್ಯದಿಂದ (Neutral Spirit) ಕೂಡಿದೆ. ಹೀಗಿರುವಾಗ “೭ ವರ್ಷ ಹಳೆಯದ್ದು” ಎಂದು ಲೇಬಲ್ ಹಾಕುವುದು ಗ್ರಾಹಕರನ್ನು ದಾರಿತಪ್ಪಿಸಿದಂತೆ ಎಂದು ಎಫ್‌ಎಸ್‌ಎಸ್‌ಎಐ (FSSAI) ವಾದಿಸಿತ್ತು.

ಲೇಬಲಿಂಗ್ ಮತ್ತು ಪದಾರ್ಥಗಳ ಸಂಯೋಜನೆಯಲ್ಲಿನ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಮಹಾರಾಷ್ಟ್ರದಲ್ಲಿ ಓಲ್ಡ್ ಮಾಂಕ್‌ನ ಕೆಲವು ಆವೃತ್ತಿಗಳ ಮಾರಾಟವನ್ನು ತಡೆಹಿಡಿದಿತ್ತು. ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರವೀಂದ್ರ ವಿ. ಘುಗೆ ಅವರು ಕಂಪನಿಯ ವಾದವನ್ನು ತೀವ್ರವಾಗಿ ತಖ್ತೆಗೆ ತೆಗೆದುಕೊಂಡರು. “ನೀವು ಸಾರ್ವಜನಿಕರನ್ನು ದಾರಿತಪ್ಪಿಸುತ್ತಿದ್ದೀರಿ… ೭ ವರ್ಷ ಹಳೆಯದ್ದು ಎಂದರೆ ಅದರ ಅರ್ಥ ೭ ವರ್ಷ ಹಳೆಯದ್ದು ಎಂದೇ ಆಗುತ್ತದೆ!” ಎಂದು ನ್ಯಾಯಪೀಠ ತೀವ್ರವಾಗಿ ಆಕ್ಷೇಪಿಸಿತು.

ಅಲ್ಲದೆ, ರಮ್‌ನಲ್ಲಿ ಕೃತಕ ಸುವಾಸನೆಗಳನ್ನು (Added Flavours) ಸೇರಿಸಿರುವ ಮಾಹಿತಿಯನ್ನು ಬಾಟಲಿಯ ಮೇಲ್ಭಾಗದಲ್ಲಿ ಅತ್ಯಂತ ಸಣ್ಣ ಅಕ್ಷರಗಳಲ್ಲಿ ಮುದ್ರಿಸಿರುವುದಕ್ಕೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಇದನ್ನೂ ಓದಿ: ಭಾರತದ ಜಿಡಿಪಿ ದರ ಶೇ. 7.8 ಕ್ಕೆ ಏರಿಕೆ: ನರೇಂದ್ರ ಮೋದಿ ಸಂತಸ, ಟೀಕಾಕಾರರಿಗೆ ಪ್ರಧಾನಿ ತಿರುಗೇಟು
ಇದಕ್ಕೆ ಪ್ರತಿಕ್ರಿಯಿಸಿದ ಮೋಹನ್ ಮೀಕಿನ್ ಸಂಸ್ಥೆಯು, ಇನ್ಮುಂದೆ ಬಾಟಲಿಗಳ ಪ್ಯಾಕೇಜಿಂಗ್‌ನಿಂದ ‘7 years old blended’ ಎಂಬ ಲೇಬಲ್ ತೆಗೆದುಹಾಕುವುದಾಗಿ ಹಾಗೂ ಕೃತಕ ಸುವಾಸನೆಗಳ ಬಳಕೆಯ ಮಾಹಿತಿಯನ್ನು ಗ್ರಾಹಕರಿಗೆ ಸ್ಪಷ್ಟವಾಗಿ ಕಾಣಿಸುವಂತೆ ಮುದ್ರಿಸುವುದಾಗಿ ಕೋರ್ಟ್‌ಗೆ ಭರವಸೆ ನೀಡಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *