ಅಬುಧಾಬಿ-ಕೊಚ್ಚಿ ವಿಮಾನದಲ್ಲಿ ಸಹಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ ಬೆಲ್ಟ್‌ನಿಂದ ಕುತ್ತಿಗೆ ಬಿಗಿದ ವ್ಯಕ್ತಿ

ಕೊಚ್ಚಿ: ಅಬುಧಾಬಿಯಿಂದ ಕೊಚ್ಚಿಗೆ ಆಗಮಿಸುತ್ತಿದ್ದ ಇಂಡಿಗೋ (IndiGo) ವಿಮಾನದೊಳಗೆ ಸಹಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ, ಬೆಲ್ಟ್‌ನಿಂದ ಕುತ್ತಿಗೆ ಬಿಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವೈಟಿಲ ಮೂಲದ ರೋಶನ್ ಮಾರ್ಟಿನ್ ಬಂಧಿತ ಆರೋಪಿಯಾಗಿದ್ದು, ತ್ರಿಶೂರ್ ನಿವಾಸಿ ಯೂಸುಫ್ ಎಂಬುವವರ ಮೇಲೆ ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ 6E1404 ವಿಮಾನದಲ್ಲಿ ಈ ಹಲ್ಲೆ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.

ನೆಡುಂಬಸ್ಸೇರಿ ಪೊಲೀಸರ ಮಾಹಿತಿಯ ಪ್ರಕಾರ, ವಿಮಾನದಲ್ಲಿ ಜಗಳ ನಡೆದ ವೇಳೆ ಆರೋಪಿ ರೋಶನ್ ಮಾರ್ಟಿನ್, ಯೂಸುಫ್ ಅವರ ಮುಖಕ್ಕೆ ಗುದ್ದಿದ್ದಾನೆ. ಇದರಿಂದ ಯೂಸುಫ್ ಅವರ ಕನ್ನಡಕ ಒಡೆದುಹೋಗಿದ್ದು, ಬಲಗಣ್ಣಿನ ಬಳಿ ಗಾಯವಾಗಿದೆ. ವಾಗ್ವಾದದ ವೇಳೆ ಆರೋಪಿ ತನ್ನ ಸೊಂಟದ ಬೆಲ್ಟ್ ಬಿಚ್ಚಿ ಯೂಸುಫ್ ಅವರ ಕುತ್ತಿಗೆಗೆ ಬಿಗಿದಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಮಾರ್ಟಿನ್ 30D ಸೀಟ್‌ನಲ್ಲಿ ಹಾಗೂ ಯೂಸುಫ್ 31B ಸೀಟ್‌ನಲ್ಲಿ ಕುಳಿತಿದ್ದರು ಎಂದು ಎಫ್‌ಐಆರ್‌ನಲ್ಲಿ (FIR) ಉಲ್ಲೇಖಿಸಲಾಗಿದೆ.

Advertisement

ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣದಲ್ಲೂ ತಪ್ಪಿದ ಭಾರೀ ದುರಂತ: ಟೇಕಾಫ್ ವೇಳೆ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ

ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲು; ಮುಂದುವರಿದ ತನಿಖೆ:

Advertisement

ದೂರಿನ ಆಧಾರದ ಮೇಲೆ ಆರೋಪಿ ರೋಶನ್ ಮಾರ್ಟಿನ್‌ನನ್ನು ಬಂಧಿಸಿರುವ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 115(2) (ಸ್ವಇಚ್ಛೆಯಿಂದ ನೋವುಂಟು ಮಾಡುವುದು) ಮತ್ತು ಸೆಕ್ಷನ್ 118(1) (ಮಾರಕ ಆಯುಧ ಅಥವಾ ಸಾಧನಗಳಿಂದ ಸ್ವಇಚ್ಛೆಯಿಂದ ನೋವು ಅಥವಾ ಗಂಭೀರ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶೀಘ್ರದಲ್ಲೇ ದೂರುದಾರರ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Advertisement