ರಷ್ಯಾ-ಉಕ್ರೇನ್ ಯುದ್ಧ ಅಂತ್ಯಕ್ಕೆ ಪ್ರಧಾನಿ ಮೋದಿ ನೀಡಿದ ‘ಉತ್ತಮ ಆಲೋಚನೆಗಳನ್ನು’ ಕೊಂಡಾಡಿದ ರಷ್ಯಾ ಅಧ್ಯಕ್ಷ ಪುಟಿನ್

ದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧಕ್ಕೆ ಶಾಂತಿಪೂರಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ‘ಉತ್ತಮ ಆಲೋಚನೆಗಳಿಗೆ’ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮುಕ್ತ ಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮಾಸ್ಕೋದಲ್ಲಿ ನಡೆದ ಪ್ರಸಿದ್ಧ ‘ವಾಲ್ಡೈ ಫೋರಮ್’ (Valdai Forum) ಅಂತರರಾಷ್ಟ್ರೀಯ ತಜ್ಞರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪುಟಿನ್, ಭಾರತದ ಪ್ರಧಾನಿ ಮೋದಿ ಅವರು ರಷ್ಯಾದೊಂದಿಗೆ ಅತ್ಯಂತ ಸ್ನೇಹಪರ ಬಾಂಧವ್ಯ ಹೊಂದಿದ್ದರೂ, ಯುದ್ಧ ನಿಲ್ಲಿಸುವ ವಿಚಾರದಲ್ಲಿ ಸದಾ ಪ್ರಾಮಾಣಿಕ ಕಳಕಳಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.

 “ನಮ್ಮ ಸ್ನೇಹಪರ ಸಂಬಂಧಗಳ ನಡುವೆಯೂ ಮೋದಿ ಯುದ್ಧ ಅಂತ್ಯಕ್ಕೆ ಒತ್ತಾಯಿಸಿದ್ದಾರೆ”: ಪುಟಿನ್

ಪ್ರಧಾನಿ ಮೋದಿ ಅವರ ಕೊಡುಗೆಯನ್ನು ಸ್ಮರಿಸಿದ ಪುಟಿನ್, “ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದೊಂದಿಗೆ ಮತ್ತು ನನ್ನೊಂದಿಗೆ ಅತ್ಯುತ್ತಮ ವೈಯಕ್ತಿಕ ಸ್ನೇಹಪರ ಸಂಬಂಧವನ್ನು ಹೊಂದಿದ್ದಾರೆ. ಹಾಗಿದ್ದರೂ, ಐದನೇ ವರ್ಷಕ್ಕೆ ಕಾಲಿಡುತ್ತಿರುವ ಉಕ್ರೇನ್ ಸಂಘರ್ಷವನ್ನು ತಕ್ಷಣವೇ ಕೊನೆಗೊಳಿಸುವ ಕುರಿತು ಸದಾ ಪ್ರಶ್ನೆಗಳನ್ನು ಎತ್ತುತ್ತಿರುವ ಪ್ರಮುಖ ವಿಶ್ವ ನಾಯಕರಲ್ಲಿ ಅವರೂ ಒಬ್ಬರು” ಎಂದರು.

ಇದನ್ನೂ ಓದಿ: 9/11 ಮಾದರಿಯ ಭೀಕರ ವಿಮಾನ ಪತನ ಸಂಚು ವಿಫಲ!: 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸ

ಮುಂದುವರಿದು ಮಾತನಾಡಿದ ಅವರು, “ಎರಡೂ ದೇಶಗಳಿಗೆ ಪರಸ್ಪರ ಸ್ವೀಕಾರಾರ್ಹವಾಗುವಂತಹ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಧಾನಿ ಮೋದಿ ಅವರು ಅಪಾರ ಆಸಕ್ತಿ ಮತ್ತು ಅತ್ಯುತ್ತಮ ಆಲೋಚನೆಗಳನ್ನು ಹೊಂದಿದ್ದಾರೆ. ಆ ಅರ್ಥದಲ್ಲಿ, ಅವರು ತಟಸ್ಥ ನಿಲುವನ್ನು ಹೊಂದಿದ್ದರೂ, ಯುದ್ಧವನ್ನು ಮುಕ್ತಾಯಗೊಳಿಸುವ ವಿಷಯದಲ್ಲಿ ತೀವ್ರ ಆಸಕ್ತಿ ವಹಿಸಿದ್ದಾರೆ. ಈ ವಿಷಯವನ್ನು ನೇರವಾಗಿ ಹೇಳುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ. ಅವರ ಆಲೋಚನೆಗಳಿಗೆ ನಾವು ಸದಾ ಕೃತಜ್ಞರಾಗಿದ್ದೇವೆ” ಎಂದು ತಿಳಿಸಿದರು.

 “ಇದು ಯುದ್ಧದ ಯುಗವಲ್ಲ” – ಪ್ರಧಾನಿ ಮೋದಿ ಶಾಂತಿ ಸಂದೇಶ:

ಕಳೆದ ತಿಂಗಳು ಭಾರತದಲ್ಲಿ ನಡೆದ ಬ್ರಿಕ್ಸ್‌‌ (BRICS) ಶೃಂಗಸಭೆಯಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗಿದ್ದ ಪ್ರಧಾನಿ ಮೋದಿ, ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಯುದ್ಧಕ್ಕೆ ಏಕೈಕ ಪರಿಹಾರ ಎಂದು ಪುನರುಚ್ಚರಿಸಿದ್ದರು.

“ನಾವು ‘ಅಂತ್ಯವಿಲ್ಲದ ಯುದ್ಧದ’ ಸ್ಥಿತಿಯಿಂದ ‘ಯುದ್ಧದ ಅಂತ್ಯದ’ ಸ್ಥಿತಿಗೆ ಸಾಗಬೇಕಿದೆ. ಯುದ್ಧವು ಶೀಘ್ರದಲ್ಲೇ ಮುಗಿಯಬೇಕೆಂಬುದು ಇಡೀ ಮಾನವಕುಲದ ಆಶಯವಾಗಿದೆ. ಭಾರತವು ಸದಾ ಶಾಂತಿಪೂರಿತ ಮಾರ್ಗಗಳನ್ನು ಬೆಂಬಲಿಸುತ್ತದೆ” ಎಂದು ಮೋದಿ ಹೇಳಿದ್ದರು. ಫೆಬ್ರವರಿ 2022 ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗಿನಿಂದಲೂ, ಪ್ರಧಾನಿ ಮೋದಿ ಅವರು ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇಬ್ಬರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು, “ಇದು ಯುದ್ಧದ ಯುಗವಲ್ಲ, ಮಾನವೀಯತೆಯ ಸವಾಲುಗಳನ್ನು ಒಟ್ಟಾಗಿ ಎದುರಿಸಬೇಕಾದ ಸಮಯ” ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ನೀಡುತ್ತಾ ಬಂದಿದ್ದಾರೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *