ಪುತ್ತೂರಿನ ಬಿಜೆಪಿಯಲ್ಲಿ ಅರುಣ್‌ ಕುಮಾರ್ ಪುತ್ತಿಲರಿಗೆ ಯಾಕಿಲ್ಲ ಮನ್ನಣೆ? ರಾಜಕೀಯದ ಒಳಸುಳಿ ಏನು?

Arun Kumar puthila and bjp conflict

ಪುತ್ತೂರು: ಜನರ ನಡುವೆ ಗುರುತಿಸಿಕೊಂಡ ನಾಯಕನಿಗೆ ರಾಜಕೀಯ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕೇ? ಕಾರ್ಯಕರ್ತರ ಬೆಂಬಲ ಹೊಂದಿರುವ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರೊಂದಿಗೆ ನಿಕಟ ಸಂಪರ್ಕ ಬೆಳೆಸಿರುವ ನಾಯಕನಿಗೆ ಚುನಾವಣೆಯಲ್ಲಿ ಅವಕಾಶ ನೀಡಬೇಕೇ? ಅಥವಾ ಸ್ಥಳೀಯ ಪಕ್ಷ ಸಂಘಟನೆಯ ರಾಜಕೀಯ ಲೆಕ್ಕಾಚಾರವೇ ಅಂತಿಮವಾಗಬೇಕೇ? ಅರುಣ್‌ ಕುಮಾರ್ ಪುತ್ತಿಲ ಮತ್ತು ಪುತ್ತೂರು ಬಿಜೆಪಿಯ ನಡುವಿನ ಸಂಬಂಧವನ್ನು ಗಮನಿಸಿದಾಗ ಇಂತಹ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ.

ಹಿಂದೂ ಸಂಘಟನೆಗಳ ಹಿನ್ನೆಲೆಯಿಂದ ಬೆಳೆದು ಬಂದ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರಿನ ರಾಜಕೀಯದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಅವರು ಕೇವಲ ಹಿಂದೂ ನಾಯಕ ಮಾತ್ರವಲ್ಲದೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ನಾಯಕರೂ ಎಂದೆನಿಸಿಕೊಂಡಿದ್ದಾರೆ. ಹೀಗಿದ್ದರೂ ಪುತ್ತಿಲರಿಗೆ ಬಿಜೆಪಿಯೊಳಗೆ ನಿರೀಕ್ಷಿತ ಸ್ಥಾನಮಾನ ಮತ್ತು ಅವಕಾಶಗಳು ದೊರೆಯದಿರಲು ಕಾರಣವೇನು ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ.

Advertisement

ಧಾರ್ಮಿಕ ಕಾರ್ಯಕ್ರಮಗಳಿಂದ ಜನರೊಂದಿಗೆ ನಂಟು

ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ಬಳಿಕ, ಇದೀಗ ಗಿರಿಜಾ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಪುತ್ತಿಲರು ಸಿದ್ಧತೆ ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಧಾರ್ಮಿಕ ನಂಬಿಕೆಗೆ ಸಂಬಂಧಿಸಿದಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನಗಳಾಗಿಯೂ ಕಾಣಿಸಿಕೊಳ್ಳುತ್ತವೆ.

ಪುತ್ತಿಲರ ಮತ್ತೊಂದು ಪ್ರಮುಖ ಗುಣವೆಂದರೆ, ಸಮಸ್ಯೆ ಎದುರಾದಾಗ ರಾತ್ರಿ ಎನ್ನದೆ ಜನರ ಕರೆಗೆ ಸ್ಪಂದಿಸುವುದು. ಸಾರ್ವಜನಿಕ ಸಮಸ್ಯೆಗಳ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿ ನೆರವಾಗುವ ನಾಯಕನಿಗೆ ಜನರೊಂದಿಗೆ ನೇರ ಸಂಪರ್ಕ ಬೆಳೆಸಿಕೊಳ್ಳಲು ಅವಕಾಶ ಸಿಗುತ್ತದೆ. ರಾಜಕೀಯದಲ್ಲಿ ಈ ರೀತಿಯ ಜನಸಂಪರ್ಕವು ಚುನಾವಣಾ ಪ್ರಚಾರಕ್ಕಿಂತಲೂ ದೀರ್ಘಕಾಲದ ಪ್ರಭಾವ ಬೀರಬಹುದು. ಅಲ್ಲದೆ, ಯುವ ಪಡೆಯನ್ನು ಸುಲಭವಾಗಿ ಆಕರ್ಷಿಸುವ ಮುಖ ಅರುಣ್‌ ಕುಮಾರ್ ಪುತ್ತಿಲ ಅವರು ತನ್ನ ಕಾರ್ಯಗಳಿಂದಲೇ ಜನರ ಮನಸ್ಸನ್ನು ಸೆಳೆಯುತ್ತಿರುವ ಸಂಘಟನಾ ಚತುರನೂ ಆಗಿದ್ದಾರೆ.

Advertisement

ಕಾರ್ಯಕರ್ತರ ಒತ್ತಾಯದ ನಡುವೆಯೂ ಟಿಕೆಟ್ ನಿರಾಕರಣೆ?

2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಪುತ್ತಿಲರ ಪರವಾಗಿ ಕಾರ್ಯಕರ್ತರಿಂದ ಒತ್ತಾಯ ವ್ಯಕ್ತವಾಗಿತ್ತು. ಆದರೂ ಅವರಿಗೆ ಟಿಕೆಟ್ ದೊರೆಯಲಿಲ್ಲ. ನಂತರ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಪುತ್ತೂರಿನ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಯಾಯಿತು.

ಈ ಘಟನೆಯಿಂದ ಒಂದು ಪ್ರಶ್ನೆ ಮೂಡುತ್ತದೆ: ಬಿಜೆಪಿಯ ಭದ್ರಕೋಟೆಯಲ್ಲಿ ಬಿಜೆಪಿಯನ್ನೇ ಮೂರನೇ ಸ್ಥಾನಕ್ಕೆ ಇಳಿಸುವಂತಹ ಸಾಮರ್ಥ್ಯ, ಬೆಂಬಲ ಹೊಂದಿರುವ ನಾಯಕನಿಗೆ ಟಿಕೆಟ್ ನೀಡದಿರುವ ವಿಚಾರದಲ್ಲಿ ಪಕ್ಷ ಯಾವ ಅಂಶಗಳಿಗೆ ಆದ್ಯತೆ ನೀಡಿತು?

Advertisement

ಆಗದ ಹೊಂದಾಣಿಕೆ

ಪುತ್ತಿಲರು ಬಿಜೆಪಿಯ ರಾಜ್ಯ ಅಥವಾ ರಾಷ್ಟ್ರೀಯ ನಾಯಕರನ್ನು ಸಾರ್ವಜನಿಕವಾಗಿ ಟೀಕಿಸದೆ, ಅವರನ್ನೇ ತಮ್ಮ ನಾಯಕರೆಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ದಾಗಲೂ ನಾಯಕರ ವಿರುದ್ಧ ಹೇಳಿಕೆ ನೀಡಿದವರಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪುತ್ತೂರಿಗೆ ಬಿಜೆಪಿ ಪರ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಸ್ವಾಗತ ಬ್ಯಾನರ್‌ಗಳನ್ನು ಹಾಕಿದ್ದರು. ಅದೇ ರೀತಿ, ಆರ್‌ಎಸ್‌ಎಸ್‌ ಮುಖಂಡ ಡಾ. ಪ್ರಭಾಕರ್‌ ಭಟ್‌ ಅವರಿಗೆ ಪುತ್ತಿಲರು ಕಾಲಿಗೆರಗಿ ಗೌರವ ಸಲ್ಲಿಸಿದ್ದ ಘಟನೆ ಅವರ ಪಕ್ಷ ಸಿದ್ಧಾಂತ ಮತ್ತು ಹಿರಿಯ ನಾಯಕರ ಬಗ್ಗೆ ಅವರ ನಿಲುವುಗಳನ್ನು ತೋರಿಸುತ್ತದೆ.

ಇಲ್ಲಿಯೇ ಮೂಲ ಪ್ರಶ್ನೆ ಉದ್ಭವಿಸುತ್ತದೆ: ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವದ ಬಗ್ಗೆ ಗೌರವ ವ್ಯಕ್ತಪಡಿಸುವ ಪುತ್ತಿಲರು ಮತ್ತು ಸ್ಥಳೀಯ ನಾಯಕರಲ್ಲಿ ಹೊಂದಾಣಿಕೆ ಸಾಧಿಸುವುದು ಯಾಕೆ ಕಷ್ಟವಾಗುತ್ತಿದೆ? ಇದು ವೈಯಕ್ತಿಕ ಪ್ರತಿಷ್ಠೆಯ ಸಮಸ್ಯೆಯೇ? ನಾಯಕತ್ವದ ಪೈಪೋಟಿಯೇ? ಅಥವಾ ಸಂಘಟನೆಯೊಳಗಿನ ರಾಜಕೀಯ ಲೆಕ್ಕಾಚಾರವೇ? ಸ್ಥಳೀಯ ಬಿಜೆಪಿ ನಾಯಕರ ವಿರೋಧವೇ?

ಪುತ್ತಿಲರ ವಿಚಾರದಲ್ಲಿ ಮಾನದಂಡ ಬೇರೆಯೇ?

ಬಿಜೆಪಿಯ ಇತಿಹಾಸದಲ್ಲಿ ಪಕ್ಷದಿಂದ ದೂರವಾದ ಬಳಿಕ ಮತ್ತೆ ಪಕ್ಷಕ್ಕೆ ಮರಳಿದ ನಾಯಕರಿಗೆ ಅವಕಾಶ ನೀಡಿದ ಉದಾಹರಣೆಗಳಿವೆ. ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರಬಂದು ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪಿಸಿದ್ದರು. ನಂತರ ಲೋಕಸಭೆ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸಲು ಬಿಜೆಪಿಗೆ ಮರಳಿದ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾದರು. ಸಂಘ ಪರಿವಾರದಿಂದ ಬಂದ ಮತ್ತೊಬ್ಬ ನಾಯಕ ಜಗದೀಶ್‌ ಶೆಟ್ಟರ್‌ ಅವರು ತತ್ವ ಸಿದ್ಧಾಂತಗಳೆಲ್ಲವನ್ನೂ ಬಿಟ್ಟು ವಿರುದ್ಧ ಸಿದ್ಧಾಂತ ಹೊಂದಿರುವ ಕಾಂಗ್ರೆಸ್‌ ಪಕ್ಷ ಸೇರಿದ್ದರು. ಅಲ್ಲಿ ಟಿಕೆಟ್‌ ಪಡೆದು ಚುನಾವಣೆಯಲ್ಲಿ ಸೋತ ನಂತರ ಮತ್ತೆ ಘರ್‌ ವಾಪ್ಸಿ ಆಗಿದ್ದ ಅವರಿಗೆ ಬಿಜೆಪಿ ಲೋಕಸಭೆ ಟಿಕೆಟ್‌ ನೀಡಿ ಸಂಸದರನ್ನಾಗಿಸಿತು.

ಇದನ್ನೂ ಓದಿ: ಹಿಂದುತ್ವಕ್ಕೆ ನನ್ನ ಜೀವನ ಮುಡಿಪು: ಆರ್‌.ಅಶೋಕ್‌ ಹೇಳಿಕೆಗೆ ಅರುಣ್ ಕುಮಾರ್‌ ಪುತ್ತಿಲ ತಿರುಗೇಟು

ಈ ಉದಾಹರಣೆಯು ಪಕ್ಷಕ್ಕೆ ಮರಳಿದ ನಾಯಕರಿಗೆ ಮತ್ತೆ ಅವಕಾಶ ನೀಡಿದ್ದನ್ನು ಬೊಟ್ಟು ಮಾಡಿ ತೋರಿಸುತ್ತಿದೆ. ಆದರೆ, ಪಕ್ಷದಿಂದ ದೂರವಾಗಿದ್ದರೂ ಪಕ್ಷದ ಸಿದ್ಧಾಂತವನ್ನು ಬಿಡದೆ ಅದೇ ಹಾದಿಯಲ್ಲಿ ಮುನ್ನಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪುತ್ತಿಲರಿಗೆ ಅವಕಾಶ ಯಾಕಿಲ್ಲ ಎನ್ನುವುದು ಯಕ್ಷ ಪ್ರಶ್ನೆ.  ಪುತ್ತಿಲರ ವಿಚಾರದಲ್ಲಿ ಹೊಂದಾಣಿಕೆ ಮತ್ತು ಸ್ಥಾನಮಾನದ ಸಮಸ್ಯೆ ಮುಂದುವರಿಯುತ್ತಿರುವುದೇಕೆ? ಪಕ್ಷವು ತನ್ನ ಕಾರ್ಯಕರ್ತರು ಮತ್ತು ನಾಯಕರಿಗೆ ಯಾವ ಮಾನದಂಡಗಳ ಆಧಾರದಲ್ಲಿ ಅವಕಾಶ ನೀಡುತ್ತದೆ ಎಂಬ ಪ್ರಶ್ನೆಯ ನಡುವೆ “ಆಗಿದ್ದು ಆಗಲಿ ಒಂದು ಅವಕಾಶ ಪುತ್ತಿಲರಿಗೂ ನೀಡಲಿ, ಅವರು ಏನು ಮಾಡುತ್ತಾರೋ ನೋಡೋಣ” ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲೂ ಕೇಳಿಬರುತ್ತಿವೆ.

ಬಿಜೆಪಿಯ ಭರವಸೆಗೆ ಸಿಗಬೇಕಿದೆ ಉತ್ತರ

ಪುತ್ತಿಲರು ಬಿಜೆಪಿಗೆ ಮರಳುವ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು, ಆದರೆ ಇದುವರೆಗೆ ಆ ಭರವಸೆ ಈಡೇರಿಲ್ಲ. ಪಕ್ಷದೊಳಗಿನ ಹೊಂದಾಣಿಕೆಯ ಪ್ರಕ್ರಿಯೆ ಎಷ್ಟು ದೂರ ಸಾಗಿದೆಯೆಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಒಂದು ರಾಜಕೀಯ ಪಕ್ಷವು ಜನಪ್ರಿಯ ನಾಯಕರನ್ನು ಮತ್ತೆ ತನ್ನೊಳಗೆ ಸೇರಿಸಿಕೊಂಡ ಬಳಿಕ ಅವರಿಗೆ ಸಂಘಟನೆಯಲ್ಲಿ ಜವಾಬ್ದಾರಿ ನೀಡದಿದ್ದರೆ, ಅವರ ಬೆಂಬಲಿಗರಲ್ಲಿ ನಿರಾಸೆ ಉಂಟಾಗಬಹುದು ನಿಶ್ಚಿತ.

ಪುತ್ತಿಲರ ಮುಂದಿನ ಹೆಜ್ಜೆ

ವಿಧಾನಸಭೆ ಚುನಾವಣೆಯ ಸೋಲಿನ ಬಳಿಕವೂ ಪುತ್ತಿಲ ಅವರು ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ. ಈ ಹಿಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದೀಗ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಭೆಗಳನ್ನು ನಡೆಸಿ ಸಂಘಟನೆಯನ್ನು ಬಲಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಬಿಜೆಪಿಯೊಂದಿಗೆ ಹೊಂದಾಣಿಕೆ ಸಾಧ್ಯವಾದರೆ, ಪುತ್ತಿಲರ ಬೆಂಬಲವು ಪಕ್ಷಕ್ಕೆ ಹೆಚ್ಚುವರಿ ಶಕ್ತಿಯಾಗಬಹುದು. ಹೊಂದಾಣಿಕೆ ಸಾಧ್ಯವಾಗದೆ ಪ್ರತ್ಯೇಕ ಅಭ್ಯರ್ಥಿಗಳು ಕಣಕ್ಕಿಳಿದರೆ, ಅದು ಪುತ್ತೂರಿನ ಬಿಜೆಪಿ ಮೇಲೆ ನೇರ ಪರಿಣಾಮ ಬೀರಬಹುದು.

ಪುತ್ತಿಲರಿಗೆ ಅವಕಾಶ ನೀಡುವುದು ಬಿಜೆಪಿಗೆ ನಷ್ಟವೇ, ಲಾಭವೇ?

ಪುತ್ತಿಲರಿಗೆ ಅವಕಾಶ ನೀಡುವುದರಿಂದ ಸ್ಥಳೀಯವಾಗಿ ಈಗಾಗಲೇ ನೆಲೆಗೊಂಡಿರುವ ನಾಯಕರ ರಾಜಕೀಯ ಪ್ರಭಾವದ ಸಮೀಕರಣ ಬದಲಾಗಬಹುದು. ಇದೇ ಕಾರಣದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂಬುದು ಸ್ಥಳೀಯ ಪಿಸುಮಾತುಗಳು. ಆದರೆ ಬಿಜೆಪಿಯ ಮುಂದೆ ದೊಡ್ಡ ಪ್ರಶ್ನೆ ಬೇರೆಯೇ ಇದೆ. ಜನರ ನಡುವೆ ಗುರುತಿಸಿಕೊಂಡಿರುವ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಕಾರ್ಯಕರ್ತರ ಬೆಂಬಲ ಹೊಂದಿರುವ ನಾಯಕನನ್ನು ಸಂಘಟನೆಯೊಳಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದಿದ್ದರೆ ಅದರಿಂದ ಪಕ್ಷಕ್ಕೆ ಲಾಭವಾಗುತ್ತದೆಯೇ?

ಪುತ್ತಿಲರಿಗೆ ತಮ್ಮ ಬೆಂಬಲವನ್ನು ಕೇವಲ ವೈಯಕ್ತಿಕ ಜನಪ್ರಿಯತೆಯ ಮಟ್ಟದಲ್ಲಿ ಉಳಿಸದೆ, ಶಿಸ್ತಿನ ಸಂಘಟನೆ ಮತ್ತು ಚುನಾವಣಾ ಸಾಧನೆಯಾಗಿ ಪರಿವರ್ತಿಸುವ ಸವಾಲಿದೆ. ಬಿಜೆಪಿಗೂ ಸ್ಥಳೀಯ ನಾಯಕತ್ವದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಕಾರ್ಯಕರ್ತರ ನಿರೀಕ್ಷೆಗಳಿಗೆ ಉತ್ತರ ನೀಡುವ ಸವಾಲಿದೆ.

ಪುತ್ತಿಲರು ಪ್ರತ್ಯೇಕ ಸ್ಪರ್ಧೆ ಬಿಜೆಪಿಗೆ ಮುಳುವಾಗಲಿದೆಯೇ?

ಪುತ್ತೂರಿನ ರಾಜಕೀಯ ಸ್ಥಿತಿಗತಿಯನ್ನು ಗಮನಿಸಿದರೆ, ಪುತ್ತಿಲರ ಬೆಂಬಲವನ್ನು ಬಿಜೆಪಿಯಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ. ಅವರ ಹಿಂದೆ ಕೇವಲ ವೈಯಕ್ತಿಕ ಅಭಿಮಾನಿಗಳ ಗುಂಪಿಲ್ಲ; ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಹಿನ್ನೆಲೆಯಿಂದ ಬಂದ ಕಾರ್ಯಕರ್ತರ ಬೆಂಬಲವೂ ಇದೆ. ಹೀಗಾಗಿ ಪುತ್ತಿಲರು ಪ್ರತ್ಯೇಕ ರಾಜಕೀಯ ದಾರಿ ಹಿಡಿದರೆ, ಅದರ ಪರಿಣಾಮ ಬಿಜೆಪಿಯ ಚುನಾವಣಾ ಲೆಕ್ಕಾಚಾರದ ಮೇಲೂ ಬೀಳಬಹುದು.

ಪುತ್ತಿಲರು 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಂದರ್ಭದಲ್ಲೇ ಈ ರಾಜಕೀಯ ಶಕ್ತಿ ಚರ್ಚೆಗೆ ಬಂದಿತ್ತು. ಈಗ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಹಿನ್ನೆಲೆಯಲ್ಲಿ ಮತ್ತೆ ಇದೇ ಪ್ರಶ್ನೆ ಮುನ್ನೆಲೆಗೆ ಬರುತ್ತಿದೆ. ಪುತ್ತಿಲರು ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಬಿಜೆಪಿ ಮತ್ತು ಪುತ್ತಿಲ ಪರಿವಾರದ ಅಭ್ಯರ್ಥಿಗಳ ನಡುವೆ ಮತಗಳು ವಿಭಜನೆಯಾಗುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿನ ದಾರಿ ಸುಲಭವಾಗುವುದರಲ್ಲಿ ಅನುಮಾನವೇ ಇಲ್ಲ. ಬಿಜೆಪಿ ಮತ್ತು ಪುತ್ತಿಲರ ನಡುವೆ ಹೊಂದಾಣಿಕೆ ವಿಫಲವಾದರೆ, ವಿರೋಧಿ ಪಕ್ಷಗಳಿಗೆ ರಾಜಕೀಯ ಅವಕಾಶ ಸೃಷ್ಟಿಯಾಗುವ ಸಾಧ್ಯತೆಯನ್ನು ನಿರ್ಲಕ್ಷಿಸಲಾಗದು.

ಬಿಜೆಪಿಗೆ ಪುತ್ತಿಲರು ಅನಿವಾರ್ಯವೇ?

ಪುತ್ತಿಲರು ಬಿಜೆಪಿಗೆ ಅನಿವಾರ್ಯ ಎಂಬುದು ರಾಜಕೀಯ ವಿಶ್ಲೇಷಣೆಯ ಒಂದು ನಿಲುವು. ಪ್ರಬಲ ನಾಯಕ ಮತ್ತು ಅವರ ಹಿಂದೆ ಇರುವ ಸಾವಿರಾರು ಬೆಂಬಲಿಗರನ್ನು ಮತ್ತೆ ಪಕ್ಷದಡಿ ಒಗ್ಗೂಡಿಸಬಹುದು, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಬೆಳೆದಿರುವ ಅವರ ಜನಸಂಪರ್ಕವನ್ನು ಸಂಘಟನೆಯ ಬಲವಾಗಿ ಬಳಸಿಕೊಳ್ಳಬಹುದು, ಸ್ಥಳೀಯ ಚುನಾವಣೆಯಲ್ಲಿ ಮತ ವಿಭಜನೆಯಾಗದಂತೆ ನೋಡಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿದೆ.

ಒಟ್ಟಾರೆಯಾಗಿ, ಜನಬೆಂಬಲ ಹೊಂದಿರುವ ನಾಯಕನನ್ನು ಪಕ್ಷದ ಬಲವನ್ನಾಗಿ ಮಾಡಿಕೊಳ್ಳಲು ಬಿಜೆಪಿ ಸಿದ್ಧವಿದೆಯೇ ಎಂಬ ಪ್ರಶ್ನೆಯ ಜೊತೆಗೆ ಪುತ್ತಿಲರ ಬೆಂಬಲವನ್ನು ಒಗ್ಗೂಡಿಸಿಕೊಂಡರೆ ಬಿಜೆಪಿಗೆ ಎಷ್ಟು ಲಾಭ, ಅವರನ್ನು ದೂರವಿಟ್ಟರೆ ಎಷ್ಟು ರಾಜಕೀಯ ನಷ್ಟ ಎಂಬುದನ್ನು ಪಕ್ಷದ ನಾಯಕತ್ವ ಲೆಕ್ಕ ಹಾಕಬೇಕಿದೆ. ಹೊಂದಾಣಿಕೆ ಸಾಧಿಸುವುದು ಪಕ್ಷದ ಸಂಘಟನಾ ಬಲವನ್ನು ಹೆಚ್ಚಿಸಬಹುದಾದರೆ, ವೈಯಕ್ತಿಕ ಭಿನ್ನಾಭಿಪ್ರಾಯಗಳು ಮುಂದುವರಿಯುವುದು ಎರಡೂ ಕಡೆಯವರಿಗೂ ಮುಂಬರುವ ಸ್ಥಳೀಯ ಚುನಾವಣೆಗಳು ಸವಾಲಾಗಬಹುದು.

ದ.ಕ. ಜಿಲ್ಲೆಯ ಪ್ರಪ್ರಥಮ ಗಿರಿಜಾ‌ಕಲ್ಯಾಣೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಗಿರಿಜಾ ಕಲ್ಯಾಣೋತ್ಸವವನ್ನು ಪುತ್ತಿಲ ಪರಿವಾರ ಟ್ರಸ್ಟ್ ಆಯೋಜಿಸಿದೆ. ಡಿ.12-13 ರಂದು ನಡೆಯುವ ಈ ಬೃಹತ್ ಧಾರ್ಮಿಕ ಕಾರ್ಯಕ್ರಮವು ಹಿಂದೂ ಸಮಾಜವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಸಂಘಟನೆ, ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಈ ಕಾರ್ಯಕ್ರಮವು ಮುಂಬರುವ ಚುನಾವಣೆಯಲ್ಲಿ ಪುತ್ತಿಲ ಪರಿವಾರಕ್ಕೆ ಪ್ಲಸ್ ಪಾಯಿಂಟ್ ಆಗಲೂಬಹುದು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ