ಬೆಂಗಳೂರು: ದಕ್ಷಿಣ ಕನ್ನಡದ ಪವಿತ್ರ ‘ದೈವಾರಾಧನೆ’ಯನ್ನು ಅಪಹಾಸ್ಯ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸಣ್ಣ ಸಮಾಧಾನ ಸಿಕ್ಕಿದೆ. ಅವರ ವಿರುದ್ಧ ಯಾವುದೇ ಬಲವಂತದ ಕ್ರಮ (Coercive Action) ಕೈಗೊಳ್ಳದಂತೆ ನೀಡಲಾಗಿದ್ದ ಮಧ್ಯಂತರ ಆದೇಶವನ್ನು ನ್ಯಾಯಾಲಯವು ಮಾರ್ಚ್ 9 ರವರೆಗೆ ವಿಸ್ತರಿಸಿದೆ.
ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ರಣವೀರ್ ಸಿಂಗ್ ಅವರು ‘ಕಾಂತಾರ’ ಸಿನಿಮಾದ ರಿಷಬ್ ಶೆಟ್ಟಿ ಅವರ ದೈವ ನರ್ತನವನ್ನು ಅನುಕರಿಸಿದ್ದರು. ಈ ವೇಳೆ ಅವರು ಪವಿತ್ರ ಚಾವುಂಡಿ ದೈವವನ್ನು “ಹೆಣ್ಣು ದೆವ್ವ” (Female Ghost) ಎಂದು ಕರೆದಿದ್ದರು ಎನ್ನಲಾಗಿದೆ. ಈ ಹೇಳಿಕೆಯು ಕರಾವಳಿ ಜನರ ಮತ್ತು ದೈವ ಭಕ್ತರ ಕೆಂಗಣ್ಣಿಗೆ ಗುರಿಯಾಗಿತ್ತು.

ಇದನ್ನೂ ಓದಿ: ದಳಪತಿ ವಿಜಯ್ – ಸಂಗೀತಾ ಡಿವೋರ್ಸ್: 600 ಕೋಟಿ ಆಸ್ತಿಯಲ್ಲಿ ಪತ್ನಿಯ ಪಾಲೆಷ್ಟು?
ಇಂದು (ಮಾರ್ಚ್ 2) ನಡೆದ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ರಣವೀರ್ ಸಿಂಗ್ ಅವರಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿತು.ನೀವು ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆಗಿರಬಹುದು, ಆದರೆ ಜನರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವ ಹಕ್ಕು ಯಾರಿಗೂ ಇಲ್ಲ ಎಂದು ನ್ಯಾಯಾಲಯ ಹೇಳಿದೆ.ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ನಟರು ಸಂಯಮದಿಂದ ಇರಬೇಕು ಮತ್ತು ವಿಷಯದ ಬಗ್ಗೆ ಅರಿವಿಲ್ಲದೆ ಮಾತನಾಡುವುದು ತಪ್ಪು ಎಂದು ಎಚ್ಚರಿಸಿದೆ. ಸರ್ಕಾರವು ಆಕ್ಷೇಪಣೆ ಸಲ್ಲಿಸಲು ಸಮಯ ಕೇಳಿದ ಹಿನ್ನೆಲೆಯಲ್ಲಿ, ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಪೊಲೀಸರು ರಣವೀರ್ ಸಿಂಗ್ ಅವರನ್ನು ಬಂಧಿಸುವಂತಿಲ್ಲ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

