ಛತ್ತೀಸ್ಗಢ : ಛತ್ತೀಸ್ಗಢದ ಕೋರ್ಬಾ ಜಿಲ್ಲೆಯಲ್ಲಿ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ತುರ್ತು ಸೇವೆ ವಾಹನದ ಚಾಲಕ ಸೇರಿ ಐವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಡಯಲ್ 112 ವಾಹನದ ಖಾಸಗಿ ಚಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಮೂವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಜನವರಿ 8ರ ರಾತ್ರಿ ಬ್ಯಾಂಕಿಮೊಂಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ.

ಇದನ್ನೂ ಓದಿ : ಹೆಂಡತಿ, ಇಬ್ಬರು ಮಕ್ಕಳಿಗೆ ಗುಂಡಿಕ್ಕಿ ಕೊಲೆ; ಆರೋಪಿಯೂ ಆತ್ಮಹತ್ಯೆ
ಆರೋಪಿಗಳಲ್ಲಿ ಒಬ್ಬನು ಯುವತಿಗೆ ಪರಿಚಿತನಾಗಿದ್ದು, ಆತ ಆಕೆಗೆ ಕರೆ ಮಾಡಿ ಭೇಟಿಯಾಗಲು ಕರೆಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಆ ಯುವತಿಯನ್ನು ಬ್ಯಾಂಕಿಮೊಂಗ್ರಾದಲ್ಲಿರುವ ನಿರ್ಜನ ಮನೆಯೊಂದಕ್ಕೆ ಕರೆದುಕೊಂಡು ಹೋಗಿ, ಚಾಲಕ ಮತ್ತು ಇತರ ನಾಲ್ವರು ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿಕೆ ನೀಡಲಾಗಿದೆ.
ಘಟನೆಯ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಯುವತಿಯನ್ನು ಅಚೇತನ ಸ್ಥಿತಿಯಲ್ಲಿ ಅಲ್ಲೇ ಬಿಟ್ಟು ಹೋಗಿದ್ದಾರೆ. ನಂತರ ಆಕೆ ಹೇಗೋ ತನ್ನ ಮನೆ ತಲುಪಿ ಕುಟುಂಬದವರಿಗೆ ವಿಷಯ ತಿಳಿಸಿದ್ದಾಳೆ. ಕುಟುಂಬದವರು ಕೂಡಲೇ ಆಕೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣವನ್ನು ಶುಕ್ರವಾರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಮೊದಲು ‘ಜೀರೋ ಎಫ್ಐಆರ್’ ಆಗಿ ದಾಖಲಿಸಲಾಗಿದ್ದು, ನಂತರ ತನಿಖೆಗಾಗಿ ಬ್ಯಾಂಕಿಮೊಂಗ್ರಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಕೋರ್ಬಾ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ ತಿವಾರಿ ಮಾತನಾಡಿ, ಚಾಲಕ ಸೇರಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಮೂವರು ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನ ನಡೆಯುತ್ತಿದೆ, ಎಂದು ತಿಳಿಸಿದ್ದಾರೆ.
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

