Breaking News

ರ್ಯಾಪಿಡೋ ಪಿಂಕ್‌’ ಬೈಕ್ ಬುಕ್ ಮಾಡಿದ ಯುವತಿಗೆ ಶಾಕ್: ಬಂದಿದ್ದು ಪುರುಷ ರೈಡರ್, ಆಕೆ ಮುಂದೆ ಶಾಕಿಂಗ್ ಹೇಳಿಕೆ ನೀಡಿದ ಚಾಲಕ

ಮುಂಬೈ: ಮಹಿಳೆಯರ ಸುರಕ್ಷತೆಗಾಗಿ ‘ರ್ಯಾಪಿಡೋ’ (Rapido) ಸಂಸ್ಥೆಯು ವಿಶೇಷವಾಗಿ ಜಾರಿಗೆ ತಂದಿರುವ ‘ಪಿಂಕ್‌ ಬೈಕ್’ (Bike Pink) ಸೇವೆಯಲ್ಲಿ ಆಘಾತಕಾರಿ ಲೋಪವೊಂದು ಬೆಳಕಿಗೆ ಬಂದಿದೆ. ಮಹಿಳಾ ಪ್ರಯಾಣಿಕರಿಗಾಗಿ ಮಹಿಳಾ ಚಾಲಕರನ್ನೇ ನಿಯೋಜಿಸುವ ಈ ಸೇವೆಯಲ್ಲಿ, ಯುವತಿಯೊಬ್ಬಳಿಗೆ ಮಹಿಳಾ ರೈಡರ್ ಬದಲಿಗೆ ಪುರುಷ ರೈಡರ್ ಒಬ್ಬ ಪ್ರತ್ಯಕ್ಷನಾಗಿರುವ ವಿಚಿತ್ರ ಮತ್ತು ಆತಂಕಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಶಾಲಿನಿ ಚತುರ್ವೇದಿ ಎಂಬ ಯುವತಿ ತಮಗಾದ ಕಹಿ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರಿ ಚರ್ಚೆಗೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಶಾಲಿನಿ ಚತುರ್ವೇದಿ ಅವರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ರ್ಯಾಪಿಡೋ ಆಪ್‌ನಲ್ಲಿ ‘ಪಿಂಕ್‌ ಆಟೋ/ಬೈಕ್’ ಆಯ್ಕೆ ಮಾಡಿಕೊಂಡು ರೈಡ್ ಬುಕ್ ಮಾಡಿದ್ದರು. ಆಪ್‌ನಲ್ಲಿ ಬುಕಿಂಗ್ ದೃಢೀಕರಿಸಿದಾಗ ಮಹಿಳಾ ಚಾಲಕಿಯ ಪ್ರೊಫೈಲ್ ಫೋಟೋ ಮತ್ತು ಹೆಸರು ಕಾಣಿಸಿಕೊಂಡಿತ್ತು.  ರೈಡ್ ಬುಕ್ ಆದ ಕೆಲವೇ ನಿಮಿಷಗಳಲ್ಲಿ ಶಾಲಿನಿ ಅವರಿಗೆ ಲೊಕೇಶನ್ ಕನ್ಫರ್ಮ್ ಮಾಡಲು ಕರೆ ಬಂದಾಗ, ಫೋನ್‌ನಲ್ಲಿ ಮಾತನಾಡಿದ್ದು ಪುರುಷ, ರೈಡರ್ ಬಂದಾಗ ಆತನನ್ನು ಪ್ರಶ್ನಿಸಿದ ಶಾಲಿನಿ, “ನಾನು ಮಹಿಳಾ ಚಾಲಕರಿಗಾಗಿ ಪಿಂಕ್‌ ರೈಡ್ ಬುಕ್ ಮಾಡಿದ್ದೆ, ನೀವು ಹೇಗೆ ಬಂದಿರಿ?” ಎಂದು ಕೇಳಿದ್ದಾರೆ. ಅದಕ್ಕೆ ಆತ “ಮ್ಯಾಡಂ, ನಾನು ಗೇ (Gay)” ಎಂದು ನಿರ್ಲಜ್ಜೆಯಿಂದ ಉತ್ತರಿಸಿದ್ದಾನೆ.

ಇದನ್ನೂ ಓದಿ: ಬಿಹಾರದ ರೈಲ್ವೆ ಸ್ಟೇಷನ್‌ನಲ್ಲಿ ಕಣ್ಣೀರು ತರಿಸುವ ಘಟನೆ: ಮೊಮ್ಮಗಳ ಪರೀಕ್ಷೆಗೆ ಬಂದ ವೃದ್ಧ 6 ದಿನಗಳಿಂದ ಪ್ಲಾಟ್‌ಫಾರ್ಮ್‌ನಲ್ಲಿ ಏಕಾಂಗಿ ಪರದಾಟ

ಕ್ಯಾನ್ಸಲೇಶನ್ ಫೀಸ್ & ಮಹಿಳಾ ಸುರಕ್ಷತೆಯ ಆತಂಕ:

ಚಾಲಕನ ಉತ್ತರದಿಂದ ಆಘಾತಕ್ಕೊಳಗಾದ ಶಾಲಿನಿ, ಸುರಕ್ಷತೆಯ ದೃಷ್ಟಿಯಿಂದ ಆ ರೈಡ್ ಅನ್ನು ತಕ್ಷಣವೇ ರದ್ದುಗೊಳಿಸಿದರು . ಆದರೆ, ₹25 ಮೊತ್ತದ ಪ್ರಯಾಣಕ್ಕೆ ರ್ಯಾಪಿಡೋ ಸಂಸ್ಥೆಯು ಶಾಲಿನಿ ಅವರಿಗೆ ₹15 ಕ್ಯಾನ್ಸಲೇಶನ್ ದಂಡ ವಿಧಿಸಿತ್ತು! “ಆ ವ್ಯಕ್ತಿ ಈಗ ನನ್ನ ಮುಖ ನೋಡಿದ್ದಾನೆ, ನಾನು ವಾಸಿಸುವ ಅಪಾರ್ಟ್‌ಮೆಂಟ್ ಕಟ್ಟಡ ಯಾವುದೆಂದು ಆತನಿಗೆ ತಿಳಿದಿದೆ. ದೇಶದಲ್ಲಿ ಮಹಿಳಾ ಭದ್ರತೆ ಎಂಬುದು ಕೇವಲ ಕಂಪನಿಗಳಿಗೆ ಲಾಭ ಮಾಡುವ ವ್ಯಾಪಾರ ಮತ್ತು ತಮಾಷೆಯಾಗಿದೆ” ಎಂದು ಶಾಲಿನಿ ವಿಡಿಯೋದಲ್ಲಿ ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ 16,000ಕ್ಕೂ ಹೆಚ್ಚು ಲೈಕ್ಸ್‌ ಪಡೆದು ವೈರಲ್ ಆಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರ್ಯಾಪಿಡೋ ಸಂಸ್ಥೆಯು ಪ್ರಕಟಣೆ ಹೊರಡಿಸಿ ಕ್ಷಮೆಯಾಚಿಸಿದೆ.  ಮೊದಲಿಗೆ ರ್ಯಾಪಿಡೋ ಸಂಸ್ಥೆಯು ಚಾಲಕನಿಗೆ ಎಚ್ಚರಿಕೆ (Warning) ನೀಡುವುದಾಗಿ ಹೇಳಿತ್ತು. ಆದರೆ, ಆತ ತನ್ನ ಕುಟುಂಬದ ಮಹಿಳೆಯೊಬ್ಬರ ಪ್ರೊಫೈಲ್ ಫೋಟೋ ಮತ್ತು ಐಡಿ ಬಳಸಿ ಅಕ್ರಮವಾಗಿ ಲಾಗಿನ್ ಆಗಿದ್ದನೆಂದು ತಿಳಿದು ಶಾಲಿನಿ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣ ಗಂಭೀರತೆ ಅರಿತ ರ್ಯಾಪಿಡೋ, ನಿಯಮ ಉಲ್ಲಂಘಿಸಿದ ಆ ಪುರುಷ ಚಾಲಕನ ಐಡಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆ್ಯಪ್‌ನಿಂದ ಖಾಯಂ ಆಗಿ ಬ್ಲಾಕ್ ಮಾಡಿದೆ. ಯುವತಿಗೆ ವಿಧಿಸಲಾಗಿದ್ದ ಕ್ಯಾನ್ಸಲೇಶನ್ ಶುಲ್ಕವನ್ನು ಮರುಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಚಾಲಕನ ಐಡಿ ರದ್ದುಪಡಿಸಿರುವ ಸಾಕ್ಷ್ಯವನ್ನು ಶಾಲಿನಿ ಅವರಿಗೆ ಕಳುಹಿಸಿಕೊಡಲಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ