ನ್ಯೂ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ, 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ತಂಡದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಅಂಗ್‌ಕ್ರಿಶ್ ರಘುವಂಶಿ, 46 ಎಸೆತಗಳಲ್ಲಿ 74 ರನ್ ಸಿಡಿಸಿ ಮಿಂಚಿದರು. ರಿಂಕು ಸಿಂಗ್ 49 ರನ್ ಗಳಿಸಿ ಅಜೇಯರಾಗಿ ಉಳಿದರೆ, ಅಜಿಂಕ್ಯ ರಹಾನೆ 19, ಫಿನ್ ಅಲೆನ್ 18 ಹಾಗೂ ಕ್ಯಾಮೆರಾನ್ ಗ್ರೀನ್ 32 ರನ್‌ಗಳ ಕೊಡುಗೆ ನೀಡಿದರು.
ಆರ್‌ಸಿಬಿ ಪರ ಜೋಷ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್ ಹಾಗೂ ರಸಿಕ್ ಸಲಾಂ ತಲಾ ಒಂದೊಂದು ವಿಕೆಟ್ ಪಡೆದು ನಿಯಂತ್ರಿತ ಬೌಲಿಂಗ್ ಪ್ರದರ್ಶಿಸಿದರು.
193 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆರ್‌ಸಿಬಿ, 19.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿ ಜಯದ ನಗೆ ಬೀರಿತು. ತಂಡದ ಗೆಲುವಿನ ಹೀರೋ ಆಗಿ ಹೊರಹೊಮ್ಮಿದ ವಿರಾಟ್ ಕೊಹ್ಲಿ ಶತಕ ಸಿಡಿಸಿ ಅಜೇಯರಾಗಿ ಉಳಿದರು. ಕೊಹ್ಲಿ ಕೇವಲ 60 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ನೆರವಿನಿಂದ 105 ರನ್ ಬಾರಿಸಿ ಆರ್‌ಸಿಬಿ ಗೆಲುವಿಗೆ ಭದ್ರ ಅಡಿಪಾಯ ಹಾಕಿದರು.
ಇದನ್ನೂ ಓದಿ: IPL: ಕಮ್ಮಿನ್ಸ್, ಹೋಲ್ಡರ್ ಬೌಲಿಂಗ್ ಕಮಾಲ್; ಮೂರಂಕಿ ದಾಟದ ಹೈದರಾಬಾದ್, ಗುಜರಾತ್‌ಗೆ ಭರ್ಜರಿ ಜಯ
ಇನ್ನಿಂಗ್ಸ್‌ಗೆ ಬೆಂಬಲವಾಗಿ ದೇವದತ್ ಪಡಿಕ್ಕಲ್ 39 ರನ್ ಗಳಿಸಿದರೆ, ಜಾಕೋಬ್ ಬೆಥೆಲ್ 15, ರಜತ್ ಪಾಟಿದಾರ್ 11, ಟಿಮ್ ಡೇವಿಡ್ 2 ಹಾಗೂ ಜಿತೇಶ್ ಶರ್ಮಾ 8 ರನ್ ಗಳಿಸಿ ಅಜೇಯರಾಗಿ ಉಳಿದರು.
ಕೋಲ್ಕತ್ತಾ ಪರ ಕಾರ್ತಿಕ್ ತ್ಯಾಗಿ 3 ವಿಕೆಟ್ ಪಡೆದು ಹೋರಾಟ ನಡೆಸಿದರೆ, ಸುನಿಲ್ ನರೈನ್ ಒಂದು ವಿಕೆಟ್ ಪಡೆದರು. ವಿರಾಟ್ ಕೊಹ್ಲಿಯ ಸ್ಫೋಟಕ ಶತಕದ ನೆರವಿನಿಂದ ಆರ್‌ಸಿಬಿ ಮಹತ್ವದ ಗೆಲುವು ದಾಖಲಿಸಿತು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


