ಮಂಗಳೂರು : ಕಾಂಬೋಡಿಯದಲ್ಲಿ ಸೈಬರ್ ವಂಚಕರ ಕೈಗೆ ಸಿಲುಕಿ ಬಂಡವಾಳ ಕಾರ್ಮಿಕರಂತೆ ಬಂಧಿತರಾಗಿದ್ದ ಮಂಗಳೂರು ಮೂಲದ ಐವರು ಯುವಕರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ತರಲು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನಗಳು ಯಶಸ್ವಿಯಾಗಿವೆ.
ಉದ್ಯೋಗದ ಹುಡುಕಾಟದಲ್ಲಿ ಕಾಂಬೋಡಿ ತೆರಳಿದ್ದ ಈ ಯುವಕರು ಸೈಬರ್ ಅಪರಾಧ ಜಾಲದಲ್ಲಿ ಸಿಲುಕಿ ತಿಂಗಳಾವಧಿ ತೀವ್ರ ಸಂಕಷ್ಟ ಅನುಭವಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಸ್ತಕ್ಷೇಪದ ಫಲವಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಐವರು ಸೇರಿದಂತೆ ಒಟ್ಟು 37 ಭಾರತೀಯರು ಜನವರಿ 27ರಂದು ಸುರಕ್ಷಿತವಾಗಿ ದೇಶಕ್ಕೆ ವಾಪಸ್ ಆಗಿದ್ದಾರೆ.

ಇದನ್ನೂ ಓದಿ : Leopard : ಮನೆಯೊಳಗೆ ನುಗ್ಗಿ ಬಾಲಕಿ ಮೇಲೆ ದಾಳಿ ನಡೆಸಿದ ಚಿರತೆ
ಮೂಲಗಳ ಪ್ರಕಾರ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕಳೆದ ಹಲವು ತಿಂಗಳಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಕಾಂಬೋಡಿಯಾದ ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಕ್ಷೇತ್ರದ ಯುವಕರ ರಕ್ಷಣೆಗೆ ಗಂಭೀರವಾಗಿ ಕ್ರಮ ಕೈಗೊಂಡಿದ್ದರು. ‘ಸೈಬರ್ ವಂಚನಾ ಜಾಲದಲ್ಲಿ ಸಿಲುಕಿದ್ದ ನಮ್ಮ ಜಿಲ್ಲೆಯ ಐವರು ಯುವಕರು ಸುರಕ್ಷಿತವಾಗಿ ಮನೆಗೆ ಮರಳಿರುವುದು ಅತ್ಯಂತ ನೆಮ್ಮದಿಯ ವಿಷಯ. ರಾಜತಾಂತ್ರಿಕ ಮಾರ್ಗದ ಮೂಲಕ ಇವರ ರಕ್ಷಣೆಯು ಸುಲಭದ ಕಾರ್ಯವಾಗಿರಲಿಲ್ಲ. ಆದರೆ ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸಂಪೂರ್ಣ ಸಹಕಾರ ನೀಡಿದೆ, ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಜೊತೆಗೆ, ವಿದೇಶಿ ಉದ್ಯೋಗದ ಆಕರ್ಷಕ ಆಫರ್‌ಗಳಿಗೆ ಮರುಳಾಗದೇ ಯುವಕರು ಎಚ್ಚರಿಕೆಯಿಂದ ಇರಬೇಕು ಮತ್ತು ಅನಧಿಕೃತ ಸಲಹಾ ಸಂಸ್ಥೆಗಳ ಬಗ್ಗೆ ಜಾಗರೂಕರಾಗಬೇಕು ಎಂದು ಸಂಸದರು ಎಚ್ಚರಿಕೆ ನೀಡಿದರು.
ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

