ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ರಂಜಾನ್ ಪ್ರಾರ್ಥನೆಗೆ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶ ನೀಡಿರುವ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಕ್ರಮಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ನಿಮಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಅಥವಾ ವರ್ಗಾವಣೆ ಕೇಳಿ” ಎಂದು ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.
ರಂಜಾನ್ ಉಪವಾಸದ ಸಮಯದಲ್ಲಿ ಪ್ರಾರ್ಥನೆ (ನಮಾಜ್) ಮಾಡದಂತೆ ತಮ್ಮನ್ನು ತಡೆಯಲಾಗುತ್ತಿದೆ ಎಂದು ಸಂಭಾಲ್ ನಿವಾಸಿ ಮುನಾಜಿರ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ, ನಿರ್ದಿಷ್ಟ ಸ್ಥಳದಲ್ಲಿ ಕೇವಲ 20 ಜನರಿಗೆ ಮಾತ್ರ ನಮಾಜ್ ಮಾಡಲು ಅನುಮತಿ ನೀಡಲಾಗಿತ್ತು. ಆ ಜಾಗದ ಮಾಲೀಕತ್ವದ ಬಗ್ಗೆಯೂ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

ಖಾಸಗಿ ಆಸ್ತಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಸರ್ಕಾರದ ಅನುಮತಿ ಅಗತ್ಯವಿಲ್ಲ ಎಂದು ಕೋರ್ಟ್ ಪುನರುಚ್ಚರಿಸಿದೆ. ಸಾರ್ವಜನಿಕ ರಸ್ತೆ ಅಥವಾ ಸರ್ಕಾರಿ ಜಾಗದಲ್ಲಿ ಪ್ರಾರ್ಥನೆ ಮಾಡಿದಾಗ ಮಾತ್ರ ಅನುಮತಿ ಬೇಕು ಎಂದು ಸ್ಪಷ್ಟಪಡಿಸಿದೆ.ಪ್ರತಿಯೊಂದು ಸಮುದಾಯದ ಜನರು ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಲು ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ. ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಜನರ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಸಿದ್ಧಾರ್ಥ್ ನಂದನ್ ಅವರಿದ್ದ ಪೀಠ ಹೇಳಿದೆ.
ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?
“ಕಾನೂನು ಸುವ್ಯವಸ್ಥೆ ಕಾಪಾಡುವುದು ನಿಮ್ಮ ಜವಾಬ್ದಾರಿ. ಅದನ್ನು ನಿರ್ವಹಿಸಲು ಶಕ್ತಿ ಇಲ್ಲದಿದ್ದರೆ ಜವಾಬ್ದಾರಿಯಿಂದ ಕೆಳಗಿಳಿಯಿರಿ” ಎಂದು ಸಂಭಾಲ್ ಕಲೆಕ್ಟರ್ ಮತ್ತು ಎಸ್ಪಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.ಈ ಕುರಿತು ರಾಜ್ಯ ಸರ್ಕಾರದಿಂದ ಸಂಪೂರ್ಣ ಮಾಹಿತಿ ಪಡೆಯುವಂತೆ ಸರ್ಕಾರಿ ಪರ ವಕೀಲರಿಗೆ ಸೂಚಿಸಿರುವ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಮಾರ್ಚ್ 16 ಕ್ಕೆ ನಿಗದಿಪಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

