ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚುತ್ತಿರುವ ಬಾಡಿ ಶೇಮಿಂಗ್ ಮತ್ತು ನಕಾರಾತ್ಮಕ ಕಾಮೆಂಟ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಸ್ಪಷ್ಟ ಅಭಿಪ್ರಾಯಗಳಿಗೆ ಹೆಸರುವಾಸಿಯಾದ ನಟಿ, ಬಾಡಿ ಶೇಮಿಂಗ್ ಬಗ್ಗೆ ತಲೆಕಡಿಸಿಕೊಳ್ಳದಂತೆ ಮತ್ತು ದುಡುಕಿನ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ.
ಆನ್‌ಲೈನ್‌ನಲ್ಲಿ ನಕಾರಾತ್ಮಕ ಕಾಮೆಂಟ್‌ಗಳನ್ನು ಹೇಗೆ ಎದುರಿಸುವುದು ಎಂಬ ಪ್ರಶ್ನೆಯನ್ನು ಕೇಳಿದಾಗ ರಚಿತಾ ರಾಮ್, ಸರಳವಾದ ಉತ್ತರ ನೀಡಿದ್ದಾರೆ. ಹೆಣ್ಣು ಮಕ್ಕಳ ದೇಹದ ಬಗ್ಗೆ ಅನೇಕರು ಕಾಮೆಂಟ್ ಮಾಡುತ್ತಾರೆ. ಆದರೆ, ಈ ಬಗ್ಗೆ ತಲೆನೇ ಕೆಡಿಸಿಕೊಳ್ಳಬಾರದು. ಅದಕ್ಕೆ ಪ್ರತಿಕ್ರಿಯೆ ನೀಡಲು ಹೋದರೆ ನಮ್ಮ ನೆಮ್ಮದಿ ಹಾಳಾಗುತ್ತದೆ. ನಾನು ಇಂತಹ ಕಾಮೆಂಟ್‌ಗಳಿಗೆ ತಲೆನೇ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ನಟ ಧನುಷ್ ಜೊತೆ ಮದುವೆ: ಮೃಣಾಲ್ ಠಾಕೂರ್ ಪರೋಕ್ಷ ಪ್ರತಿಕ್ರಿಯೆ ಹೀಗಿದೆ
ನಮ್ಮ ಸಮಸ್ಯೆಗಳನ್ನು ಎಲ್ಲರ ಬಳಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿನ ನಕಾರಾತ್ಮಕ ಕಾಮೆಂಟ್‌ಗಳಿಗೆ ಅಳುತ್ತಾ ಕೂತರೆ ಆಗುತ್ತಾ? ಎಂದು ಪ್ರಶ್ನಿಸಿದ ಡಿಂಪಲ್ ಕ್ವೀನ್, ಯಾರೋ ಕಾಮೆಂಟ್ ಹೊಡೆದರು ಎಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಅಂತಹ ದುಡುಕಿನ ನಿರ್ಧಾರ ಕೈಗೊಳ್ಳುವವರು ಮುಠಾಳರು ಎಂದು ಆಕ್ರೋಶವಾಗಿಯೇ ಹೇಳಿದರು.
ನನ್ನ ದೇಹ, ನನ್ನ ಇಷ್ಟ
ಬಾಡಿ ಶೇಮಿಂಗ್ ಬಗ್ಗೆ ಮುಂದುವರಿದು ಮಾತನಾಡಿದ ರಚಿತಾ ರಾಮ್, ಹೆಣ್ಣು ಮಕ್ಕಳು ಯಾಕೆ ದಪ್ಪ ಆಗುತ್ತಾರೆ ಎಂದು ಪ್ರಶ್ನಿಸಿ ಹೆಣ್ಣು ಮಕ್ಕಳ ದೈಹಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಹೆಣ್ಣುಮಕ್ಕಳ ದೇಹ ಒಬ್ಬೊಬ್ಬರದ್ದು ಒಂದೊಂದು ರೀತಿಯಲ್ಲಿ ಇರುತ್ತದೆ. ಕೆಲವರು ಡಯೆಟ್ ಮಾಡಿದರೂ ದಪ್ಪ ಆಗುತ್ತಾರೆ. ಇನ್ನು ಕೆಲವರು ಒತ್ತಡದಿಂದ ಅಥವಾ ನಿದ್ರಾಹೀನತೆಯಿಂದಲೂ ದಪ್ಪ ಆಗುತ್ತಾರೆ. ಇನ್ನೂ ಕೆಲವರು ಪಿಸಿಒಡಿಯಂತಹ ಆರೋಗ್ಯ ಸಮಸ್ಯೆಗಳಿಂದ ದಪ್ಪಗಾಗುತ್ತಾರೆ. ಮುಟ್ಟಾಗುವ ಐದು ದಿನ ಮುನ್ನ ಬಾಡಿ ಕೋಲ್ಡ್ ಆಗುತ್ತದೆ, ಮುಟ್ಟಾದ ಐದು ದಿನಗಳ ನಂತರ ನಾವು ಕುಗ್ಗಿ ಹೋಗುತ್ತೇವೆ. ಎಲ್ಲಾ ಗಂಡ್ಮಕ್ಳನ್ನು ಮೆಚ್ಚಿಸಿಕೊಂಡು ಹೋಗಲು ಸಾಧ್ಯವಿಲ್ಲ. ನನ್ನ ದೇಹ, ನನ್ನ ಜೀವನ ನನ್ನ ಇಷ್ಟ ಎಂದು ಹೇಳಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

