ಡೆಹ್ರಾಡೂನ್: ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಬದರಿನಾಥ ಮತ್ತು ಕೇದಾರನಾಥ ಸೇರಿದಂತೆ ಒಟ್ಟು 47 ದೇವಾಲಯಗಳಿಗೆ ಅನ್ಯಧರ್ಮೀಯರ ಪ್ರವೇಶದ ಕುರಿತು ಬದರಿನಾಥ-ಕೇದಾರನಾಥ ಮಂದಿರ ಸಮಿತಿ (BKTC) ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಅನ್ಯಧರ್ಮೀಯರು ಈ ದೇವಾಲಯಗಳಿಗೆ ಪ್ರವೇಶಿಸಬೇಕಾದರೆ “ಸನಾತನ ಧರ್ಮದ ಮೇಲೆ ನಂಬಿಕೆಯಿದೆ” ಎಂದು ಲಿಖಿತವಾಗಿ ಅಫಿಡವಿಟ್ (Affidavit) ಸಲ್ಲಿಸುವುದು ಕಡ್ಡಾಯವಾಗಿದೆ.
ಸನಾತನ ಧರ್ಮದ ಅನುಯಾಯಿಗಳಲ್ಲದವರು ದೇವಾಲಯದ ಆವರಣದೊಳಗೆ ಪ್ರವೇಶಿಸುವ ಮುನ್ನ ತಮಗೆ ಹಿಂದೂ ಧರ್ಮ ಮತ್ತು ಅದರ ಸಂಪ್ರದಾಯಗಳ ಮೇಲೆ ಅಪಾರ ನಂಬಿಕೆಯಿದೆ ಎಂದು ಘೋಷಿಸುವ ಪತ್ರಕ್ಕೆ ಸಹಿ ಹಾಕಬೇಕು. ದೇವಾಲಯಗಳ ಧಾರ್ಮಿಕ ಪಾವಿತ್ರ್ಯತೆ ಮತ್ತು ಸಂಪ್ರದಾಯಗಳನ್ನು ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.

ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಉದಾಹರಣೆ ನೀಡಿದ್ದಾರೆ. ಸಾರಾ ಅಲಿ ಖಾನ್ ಈ ಹಿಂದೆ ಹಲವು ಬಾರಿ ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ. ಹೊಸ ನಿಯಮದಂತೆ, ಅವರು ಕೂಡ ಸನಾತನ ಧರ್ಮದಲ್ಲಿ ನಂಬಿಕೆಯಿದೆ ಎಂದು ಅಫಿಡವಿಟ್ ನೀಡಿದರೆ ಮಾತ್ರ ಅವರಿಗೆ ಪ್ರವೇಶ ಲಭ್ಯವಾಗಲಿದೆ.
ಇದನ್ನೂ ಓದಿ: ಹೊಸ ನಟಿಯರನ್ನು ವೇಶ್ಯಾವೃತ್ತಿಗೆ ತಳ್ಳುತ್ತಾರೆ: ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ತನುಶ್ರೀ ದತ್ತಾ
ಬದರಿನಾಥ-ಕೇದಾರನಾಥ ಮಂದಿರ ಸಮಿತಿಯ ಅಡಿಯಲ್ಲಿ ಬರುವ 47 ದೇವಾಲಯಗಳಿಗೆ ಈ ನಿಯಮ ಅನ್ವಯವಾಗಲಿದೆ. ದೇವಾಲಯದ ಆವರಣದಲ್ಲೇ ಈ ಅಫಿಡವಿಟ್ ಫಾರ್ಮ್‌ಗಳು ಲಭ್ಯವಿರಲಿವೆ. ಈ ನಿರ್ಧಾರವು ಉತ್ತರಾಖಂಡದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು ಸಂಪ್ರದಾಯ ರಕ್ಷಣೆಯ ಕ್ರಮ ಎಂದು ಬೆಂಬಲಿಸಿದರೆ, ಇನ್ನು ಕೆಲವರು ಪ್ರವಾಸೋದ್ಯಮದ ಮೇಲೆ ಇದರ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

