ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ (ಫೆಬ್ರವರಿ 10, 2026) ಒಂದು ಕುತೂಹಲಕಾರಿ ಘಟನೆ ನಡೆದಿದೆ. ಪ್ರಸಿದ್ಧ ಗಾಯಕಿ ಮತ್ತು ಈಗ ಬಿಜೆಪಿ ಶಾಸಕಿಯಾಗಿರುವ ಮೈಥಿಲಿ ಠಾಕೂರ್, ತಮ್ಮದೇ ಸರ್ಕಾರದ ಆರೋಗ್ಯ ಸಚಿವರನ್ನು ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಪ್ರಶ್ನಿಸಿ ಸುದ್ದಿಯಾಗಿದ್ದಾರೆ. ಬಿಹಾರದ ಅಲಿನಗರ ಕ್ಷೇತ್ರದ ಶಾಸಕಿಯಾಗಿರುವ ಮೈಥಿಲಿ ಠಾಕೂರ್, ತಮ್ಮ ಕ್ಷೇತ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ನೀಡಿದ ಉತ್ತರವು ಕೇವಲ ಕಾಗದದ ಮೇಲಿರುವ ವರದಿಯಂತಿದೆ ಎಂದು ಮೈಥಿಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಸಚಿವರ ಉತ್ತರದಿಂದ ಸಂಪೂರ್ಣವಾಗಿ ತೃಪ್ತಳಾಗಿಲ್ಲ ಆಸ್ಪತ್ರೆಯ ಕಟ್ಟಡ ಸುಸ್ಥಿತಿಯಲ್ಲಿದೆ ಎಂದು ವರದಿ ಹೇಳುತ್ತಿದೆ, ಆದರೆ ನಾನು ಖುದ್ದಾಗಿ ಭೇಟಿ ನೀಡಿದಾಗ ಅದು ಶಿಥಿಲಾವಸ್ಥೆಯಲ್ಲಿದೆ ಎಂದು ಹೇಳಿದ್ದಾರೆ. ಮೈಥಿಲಿ ಠಾಕೂರ್ ಅವರ ಪ್ರಕಾರ, ಆಸ್ಪತ್ರೆಯ ಛಾವಣಿಯಿಂದ ಪ್ಲಾಸ್ಟರ್ ಉದುರುತ್ತಿದೆ ಮತ್ತು ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಇಂತಹ ಅಪಾಯಕಾರಿ ಕಟ್ಟಡದಲ್ಲಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಇದು ಜನರ ಜೀವಕ್ಕೆ ಅಪಾಯಕಾರಿ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಸಂಪೂರ್ಣ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯ! ಕೇಂದ್ರದಿಂದ ಮಹತ್ವದ ಆದೇಶ
ಈ ಹಿಂದೆ ಈ ಆಸ್ಪತ್ರೆಯಲ್ಲಿ ಇಬ್ಬರು ಎಂಬಿಬಿಎಸ್ (MBBS) ವೈದ್ಯರಿದ್ದರು, ಆದರೆ ಈಗ ಒಬ್ಬರೂ ಇಲ್ಲ. ಕೇವಲ ಆಯುಷ್ ವೈದ್ಯರ ಮೂಲಕ ಆಸ್ಪತ್ರೆ ನಡೆಯುತ್ತಿದೆ ಎಂದು ಅವರು ಗಮನ ಸೆಳೆದಿದ್ದಾರೆ. ಸುಮಾರು 40,000 ದಿಂದ 50,000 ಜನರಿಗೆ ಅನುಕೂಲವಾಗುವ ಈ ಆಸ್ಪತ್ರೆಗೆ ಕನಿಷ್ಠ ಇಬ್ಬರು ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ತಮ್ಮದೇ ಪಕ್ಷದ ಸಚಿವರ ವಿರುದ್ಧ ಈ ರೀತಿ ಧ್ವನಿ ಎತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. “ಜನಪ್ರತಿನಿಧಿಯಾದವಳು ಪಕ್ಷಕ್ಕಿಂತ ಹೆಚ್ಚಾಗಿ ಜನರ ಹಿತಾಸಕ್ತಿಗೆ ಆದ್ಯತೆ ನೀಡಬೇಕು” ಎಂದು ನೆಟ್ಟಿಗರು ಮೈಥಿಲಿ ಠಾಕೂರ್ ಅವರನ್ನು ಶ್ಲಾಘಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

