ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ ಫಲಿತಾಂಶ ಪ್ರಕಟದ ನಂತರ ಮತ್ತು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಕಳೆದುಕೊಂಡ ನಂತರ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿದ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದ ದುರುಪಯೋಗದಿಂದಾಗಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಅಧಿಕೃತ ಯಂತ್ರೋಪಕರಣಗಳನ್ನು ಬಳಸಿಕೊಂಡು ತಮ್ಮ ಪಕ್ಷವನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಠಾಕ್ರೆ, “ನಾವು ಸೋತಿದ್ದೇವೆ ಎಂದು ನಾನು ನಂಬುವುದಿಲ್ಲ. ನಮ್ಮ ಸೋಲು ಘನತೆ ಮತ್ತು ಶಕ್ತಿಯನ್ನು ಹೊಂದಿದೆ. ಆದರೆ ಅವರ ಗೆಲುವು ಕಲೆಗಳಿಂದ ಕೂಡಿದೆ” ಎಂದು ಠಾಕ್ರೆ ಹೇಳಿದರು, ಬಿಜೆಪಿಯು ಅನುಕೂಲಕ್ಕಾಗಿ ಮಿತ್ರಪಕ್ಷಗಳನ್ನು ಬಳಸಿಕೊಂಡು ಅಂತಿಮವಾಗಿ ಅವುಗಳನ್ನು ತ್ಯಜಿಸುವ ಅನಕೊಂಡ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಮುಂಬೈ ಪಾಲಿಕೆ ಬಿಜೆಪಿ ಮೈತ್ರಿ ತೆಕ್ಕೆಗೆ: ಠಾಕ್ರೆ ಪ್ರಾಬಲ್ಯ ಅಂತ್ಯ, ಕಾಂಗ್ರೆಸ್ಗೆ ಮತ ವಿಭಜನೆಯ ಹೊಡೆತ
ಶಿವಸೇನೆ ತಳಮಟ್ಟದಲ್ಲಿ ಬಲವಾಗಿದ್ದು, ಇದನ್ನು ಬಲಹೀನಗೋಳಿಸಲು ಬಿಜೆಪಿ ವಿಫಲಗೊಂಡಿದೆ ಎಂದು ಫಲಿತಾಂಶ ತೋರಿಸುತ್ತದೆ. ಬಿಜೆಪಿಗೆ ನಿಜವಾಗಿಯೂ ತಳಮಟ್ಟದಲ್ಲಿ ಬಲವಿದ್ದರೆ, ಅವರು ಪಕ್ಷಗಳನ್ನು ಒಡೆಯುವ ಅಥವಾ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಅಗತ್ಯವಿರಲಿಲ್ಲ ಎಂದು ಹೇಳುವ ಮೂಲಕ ಶಿವಸೇನೆ ವಿಭಾಗಗೊಂಡ ಹಾಗೂ ವಿಪಕ್ಷಗಳ ಮೇಲಿನ ಜಾರಿ ನಿರ್ದೇಶನಾಲಯಗಳ ದಾಳಿಯ ವಿರುದ್ಧ ಆಕ್ರೋಶ ಹೊರಹಾಕಿದರು.
ಕಡಿಮೆ ಪ್ರಚಾರದ ಬಗ್ಗೆ ಒಪ್ಪಿಕೊಂಡ ಠಾಕ್ರೆ, ಚುನಾವಣೆಯ ಸಮಯದಲ್ಲಿ ಮುಂಬೈ, ಥಾಣೆ ಮತ್ತು ಛತ್ರಪತಿ ಸಂಭಾಜಿ ನಗರಕ್ಕೆ ಮಾತ್ರ ಭೇಟಿ ನೀಡಲು ಸಾಧ್ಯವಾಯಿತು. ಪ್ರವಾರಕ್ಕೆ ಹೋಗದ ಕ್ಷೇತ್ರಗಳಲ್ಲಿನ ಪಕ್ಷದ ಕಾರ್ಯಕರ್ತರು ಮತ್ತು ಮತದಾರರಿಗೆ ಕ್ಷಮೆಯಾಚಿಸಿದರು.
ಇದನ್ನೂ ಓದಿ: ಬಿಎಂಸಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮೂಲದ ಅಭ್ಯರ್ಥಿಗಳ ಗೆಲುವು
ಪ್ರತಿ ಕ್ಷೇತ್ರದಲ್ಲೂ ಮಾಡು ಇಲ್ಲವೇ ಮಡಿ ಸ್ಫರ್ಧೆ
ಚುನಾವಣೆಗಳನ್ನು ಕೊಳಕು ಮತ್ತು ಹತಾಶ ರೀತಿಯಲ್ಲಿ ನಡೆಸಲಾಯಿತು. ಪ್ರತಿಯೊಂದು ಸ್ಥಾನವನ್ನು ಮಾಡು-ಅಥವಾ-ಮಡಿ ಯುದ್ಧವೆಂದು ಪರಿಗಣಿಸಲಾಯಿತು. ಎಲ್ಲಾ ನೈತಿಕ ಮಿತಿಗಳನ್ನು ಮೀರಿದೆ. ಹಣ, ಬೆದರಿಕೆ ಮತ್ತು ಒತ್ತಡವನ್ನು ವಿರೋಧಿಸಿ ಮತ ಚಲಾಯಿಸಿದವರು ಪ್ರಜಾಪ್ರಭುತ್ವದ ನಿಜವಾದ ರಕ್ಷಕರು” ಎಂದು ಅವರು ಹೇಳಿದರು.
ಫಲಿತಾಂಶದ ವಿಶ್ವಾಸಾರ್ಹತೆ ಪ್ರಶ್ನಿಸಿದ ಠಾಕ್ರೆ
ಫಲಿತಾಂಶಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಠಾಕ್ರೆ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮೋದಿ ಪ್ರಚಾರ ಮಾಡಿದಾಗ ಮತ್ತು ಈಗ ಫಡ್ನವೀಸ್ ಪ್ರಚಾರ ಮಾಡಿದಾಗ, ಕುರ್ಚಿಗಳು ಖಾಲಿಯಾಗಿದ್ದವು. ರಾಜ್ ಮತ್ತು ನನ್ನೊಂದಿಗಿನ ನಮ್ಮ ರ್ಯಾಲಿಗಳು ತುಂಬಿ ತುಳುಕುತ್ತಿದ್ದವು. ಖಾಲಿ ಕುರ್ಚಿಗಳು ಹೇಗೆ ಮತಗಳಾಗಿ ಮಾರ್ಪಟ್ಟವು ಎಂಬುದು ನನಗೆ ಇನ್ನೂ ಯಕ್ಷ ಪ್ರಶ್ನೆಯಾಗಿದೆ ಎಂದರು.
ಅನುದಾನದ ದುರುಪಯೋಗ
ಬಿಜೆಪಿಯ ಯಶಸ್ಸಿಗೆ ಅಭಿವೃದ್ಧಿ ನಿಧಿಯ ದುರುಪಯೋಗವೇ ಕಾರಣ ಎಂದು ಆರೋಪಿಸಿದ ಠಾಕ್ರೆ, ಹಣವನ್ನು ಗೃಹೋಪಯೋಗಿ ವಸ್ತುಗಳು, ಸೀರೆಗಳು ಮತ್ತು ನಗದು ರೂಪದಲ್ಲಿ ವಿತರಿಸಲಾಗಿದೆ. ಇಷ್ಟೆಲ್ಲಾ ಹಣ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

